ಪಾಕಿಸ್ತಾನದ ಬಲೂಚಿಸ್ತಾನ ಪ್ರದೇಶದ ಬಗ್ಗೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಇತ್ತೀಚೆಗೆ ನೀಡಿದ ಹೇಳಿಕೆಯು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯಿಂದಾಗಿ ಪಾಕಿಸ್ತಾನ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಲ್ಮಾನ್ ಖಾನ್ ಅವರನ್ನು ಭಯೋತ್ಪಾದಕ ಎಂದು ಅಧಿಕೃತವಾಗಿ ಕಪ್ಪುಪಟ್ಟಿಗೆ ಸೇರಿಸಿದೆ.
ಈ ಕಾಯ್ದೆಯಡಿ ಸೇರ್ಪಡೆಯಾದ ವ್ಯಕ್ತಿಗಳ ಮೇಲೆ ಕಟ್ಟುನಿಟ್ಟಾದ ಕಣ್ಣಾವಲಿ, ಚಲನಚಿತ್ರ ನಿರ್ಮಾಣ ಮತ್ತು ಪ್ರಯಾಣ ನಿರ್ಬಂಧಗಳು, ಹಾಗೂ ಸಂಭಾವ್ಯ ಕಾನೂನು ಕ್ರಮಗಳು ಜಾರಿಯಾಗುತ್ತವೆ. ಇದು ಸಲ್ಮಾನ್ ಖಾನ್ ಅವರ ವೃತ್ತಿಜೀವನ ಮತ್ತು ಅಂತಾರಾಷ್ಟ್ರೀಯ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಡೆದ ಜಾಯ್ ಫೋರಮ್ 2025 ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಆಮಿರ್ ಖಾನ್ ಅವರು ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದರು. ಈ ಸಂದರ್ಭದಲ್ಲಿ ಮಧ್ಯಪ್ರಾಚ್ಯದಲ್ಲಿ ಭಾರತೀಯ ಚಲನಚಿತ್ರಗಳ ಜನಪ್ರಿಯತೆಯ ಬಗ್ಗೆ ಚರ್ಚಿಸುತ್ತಾ ಸಲ್ಮಾನ್ ಖಾನ್ ಹೀಗೆಂದಿದ್ದರು:
ಈಗ, ನೀವು ಹಿಂದಿ ಸಿನಿಮಾ ಮಾಡಿ ಇಲ್ಲಿ ಸೌದಿ ಅರೇಬಿಯಾದಲ್ಲಿ ಬಿಡುಗಡೆ ಮಾಡಿದರೆ, ಅದು ಸೂಪರ್ ಹಿಟ್ ಆಗುತ್ತದೆ. ನೀವು ತಮಿಳು, ತೆಲುಗು ಅಥವಾ ಮಲಯಾಳಿ ಸಿನಿಮಾ ಮಾಡಿದರೆ, ನೂರಾರು ಕೋಟಿ ವ್ಯವಹಾರ ಮಾಡುತ್ತದೆ. ಏಕೆಂದರೆ ಇತರ ದೇಶಗಳಿಂದ ಇಲ್ಲಿಗೆ ಅನೇಕ ಜನರು ಬಂದಿದ್ದಾರೆ. ಬಲೂಚಿಸ್ತಾನದ ಜನರಿದ್ದಾರೆ, ಅಫ್ಘಾನಿಸ್ತಾನದ ಜನರಿದ್ದಾರೆ, ಪಾಕಿಸ್ತಾನದ ಜನರಿದ್ದಾರೆ… ಎಲ್ಲರೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ
ಈ ಹೇಳಿಕೆಯಲ್ಲಿ ಬಲೂಚಿಸ್ತಾನದ ಜನರು ಎಂದು ಪ್ರತ್ಯೇಕವಾಗಿ ಉಲ್ಲೇಖಿಸಿದ್ದು ಪಾಕಿಸ್ತಾನ ಸರ್ಕಾರಕ್ಕೆ ತೀವ್ರ ಕೆರಳಿಕೆಯನ್ನುಂಟುಮಾಡಿದೆ. ಪಾಕಿಸ್ತಾನದಲ್ಲಿ ಬಲೂಚಿಸ್ತಾನವು ಅವಿಭಾಜ್ಯ ಭಾಗವಾಗಿದ್ದು, ಅದನ್ನು ಪ್ರತ್ಯೇಕ ಘಟಕವೆಂದು ಉಲ್ಲೇಖಿಸುವುದು ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಬೆಂಬಲ ನೀಡಿದಂತೆ ಎಂದು ಪಾಕ್ ಸರ್ಕಾರ ಆರೋಪಿಸಿದೆ.
ಆದರೆ ಈ ಹೇಳಿಕೆಯನ್ನು ಬಲೂಚ್ ಪ್ರತ್ಯೇಕತಾವಾದಿ ನಾಯಕರು ಸ್ವಾಗತಿಸಿದ್ದಾರೆ. ಬಲೂಚ್ ರಿಪಬ್ಲಿಕನ್ ಆರ್ಮಿ (BRA) ಮತ್ತು ಬಲೂಚ್ ಲಿಬರೇಶನ್ ಫ್ರಂಟ್ (BLF) ನಂತಹ ಸಂಘಟನೆಗಳು ಸಲ್ಮಾನ್ ಖಾನ್ ಅವರನ್ನು “ಬಲೂಚ್ ಜನರ ಧ್ವನಿ” ಎಂದು ಕರೆದು ಪ್ರಶಂಸಿಸಿವೆ. ಅಂತರರಾಷ್ಟ್ರೀಯ ವೇದಿಕೆಯಲ್ಲಿ ಬಲೂಚಿಸ್ತಾನದ ಜನರನ್ನು ಗುರುತಿಸಿದ್ದಕ್ಕೆ ಸಲ್ಮಾನ್ ಖಾನ್ ಅವರಿಗೆ ಧನ್ಯವಾದಗಳು ಎಂದು ಬಲೂಚ್ ನಾಯಕ ಬ್ರಹುಮ್‌ದಾಗ್ ಬುಗ್ತಿ ಅವರ ಸಂಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದೆ.
 
			
 
					




 
                             
                             
                             
                             
                            