ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸ್ಥಾಪನೆಯ 100 ವರ್ಷ ಪೂರೈಸಿದ ಸಂದರ್ಭದಲ್ಲಿ, ಸಂಘಟನೆಯ ಶತಮಾನೋತ್ಸವ ಅಕ್ಟೋಬರ್ 1, 2025ರಂದು ನವದೆಹಲಿಯಲ್ಲಿ ವಿಜೃಂಭಣೆಯಿಂದ ಆಚರಿಸಲಾಗಿದೆ. ಈ ಐತಿಹಾಸಿಕ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು 100 ರೂಪಾಯಿ ಮುಖಬೆಲೆಯ ಸ್ಮಾರಕ ನಾಣ್ಯ ಮತ್ತು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.
ಬಿಡುಗಡೆಯಾದ 100 ರೂಪಾಯಿ ನಾಣ್ಯವು ಭಾರತೀಯ ಚಲಾವಣೆಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಹೊಂದಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾರತೀಯ ಕರೆನ್ಸಿಯೊಂದರಲ್ಲಿ ಭಾರತ ಮಾತೆಯ ಚಿತ್ರವನ್ನು ಮುದ್ರಿಸಲಾಗಿರುವುದು ಇದೇ ಮೊದಲ ಬಾರಿ. ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಅವರು, “ಈ ಕರೆನ್ಸಿಗೆ ಐತಿಹಾಸಿಕ ಮಹತ್ವ ಇದೆ. ಇದು ಹೆಮ್ಮೆಯ ಕ್ಷಣ” ಎಂದು ಭಾವುಕರಾಗಿದ್ದರು.
ಒಂದು ಬದಿ ರಾಷ್ಟ್ರೀಯ ಲಾಂಛನ (ಅಶೋಕ ಚಕ್ರ)ದ ಚಿತ್ರವಿದ್ದರೆ ಮತ್ತೊಂದು ಬದಿ ಸಿಂಹದೊಂದಿಗೆ ವೀರ ಮುದ್ರೆಯಲ್ಲಿರುವ ಭಾರತ್ ಮಾತೆಯ ಚಿತ್ರ ಮತ್ತು ಅವರಿಗೆ ವಂದಿಸುತ್ತಿರುವ ಆರ್‌ಎಸ್‌ಎಸ್ ಸ್ವಯಂಸೇವಕರ ಚಿತ್ರ ಕಾಣಸಿಗುತ್ತದೆ. ಜೊತೆಗೆ ನಾಣ್ಯದ ಮೇಲೆ ಸಂಸ್ಕೃತ ಶ್ಲೋಕ ‘ರಾಷ್ಟ್ರಾಯ ಸ್ವಾಹ, ಇದಂ ರಾಷ್ಟ್ರಾಯ, ಇದಂ ನಾ ಮಮ‘ (ಪ್ರತಿಯೊಂದೂ ದೇಶಕ್ಕೆ ಸಮರ್ಪಿತ, ಎಲ್ಲವೂ ದೇಶಕ್ಕೆ ಸೇರಿದ್ದು, ನನ್ನದೆನ್ನುವುದು ಯಾವುದೂ ಇಲ್ಲ) ಎಂಬ ಧ್ಯೇಯ ವಾಕ್ಯವನ್ನು ಕೆತ್ತಲಾಗಿದೆ.
ಸ್ಮರಣಾರ್ಥ ಅಂಚೆ ಚೀಟಿಯ ವಿಶೇಷತೆ
ಈ ಸಂದರ್ಭದಲ್ಲಿ ಬಿಡುಗಡೆಯಾದ ವಿಶೇಷ ಅಂಚೆ ಚೀಟಿಯು (ಪೋಸ್ಟಲ್ ಸ್ಟ್ಯಾಂಪ್) ಸಹ ಆರ್‌ಎಸ್‌ಎಸ್‌ನ ಐತಿಹಾಸಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ಈ ಸ್ಟ್ಯಾಂಪ್‌ನಲ್ಲಿ 1963ರ ಗಣರಾಜ್ಯೋತ್ಸವದಲ್ಲಿ ನಡೆದ ಆರ್‌ಎಸ್‌ಎಸ್ ಪಥ ಸಂಚಲನದ ಐತಿಹಾಸಿಕ ಚಿತ್ರವನ್ನು ಸೇರಿಸಲಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು 1925ರಲ್ಲಿ ಮಹಾರಾಷ್ಟ್ರದ ನಾಗಪುರ್‌ನಲ್ಲಿ ಸ್ಥಾಪಿಸಲಾಗಿತ್ತು. ಈ ವರ್ಷ ಆರ್‌ಎಸ್‌ಎಸ್ ತನ್ನ ಶತಮಾನೋತ್ಸವ (100 ವರ್ಷ) ಆಚರಿಸುತ್ತಿದೆ. ಈ ಐತಿಹಾಸಿಕ ಸನ್ನಿವೇಶವನ್ನು ಚಿರಸ್ಮರಣೀಯಗೊಳಿಸಲು ಸ್ಮಾರಕ ನಾಣ್ಯ ಮತ್ತು ಅಂಚೆ ಚೀಟಿ ಬಿಡುಗಡೆ ಮಾಡಲಾಗಿದೆ.
ದೆಹಲಿಯ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್‌ನಲ್ಲಿ ನಡೆದ ಈ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಮತ್ತು ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರು ಸೇರಿದಂತೆ ಹಲವು ಗಣ್ಯಾಂಗದ ವ್ಯಕ್ತಿಗಳು ಭಾಗವಹಿಸಿದ್ದರು.





