ನವದೆಹಲಿ: ಚುನಾವಣಾ ಆಯೋಗದ ತಟಸ್ಥತೆಯನ್ನು ಪ್ರಶ್ನಿಸಿ, ಮತಗಳ್ಳತನದ ಆರೋಪದ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ಇತರ 30 ಮಂದಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂಡಿಯಾ ಒಕ್ಕೂಟದ ನೇತೃತ್ವದಲ್ಲಿ ಸಂಸತ್ ಭವನದಿಂದ ಚುನಾವಣಾ ಆಯೋಗದ ಕಚೇರಿ ಕಡೆ ಪ್ರತಿಭಟನಾ ಮೆರವಣಿಗೆ ಮುಂದಾಗಿತ್ತು. ಆದರೆ, ನಿಯಮಾನುಸಾರ ಅನುಮತಿ ಇಲ್ಲದ ಕಾರಣದಿಂದ ಪೊಲೀಸರು ಮೆರವಣಿಗೆಯನ್ನು ತಡೆಯುತ್ತ, ಎಲ್ಲರನ್ನು ವಶಕ್ಕೆ ಪಡೆದುಕೊಂಡರು.
ಪ್ರದರ್ಶನಕಾರರು ಧ್ವಜ, ಬ್ಯಾನರ್ಗಳೊಂದಿಗೆ ಘೋಷಣೆ ಕೂಗುತ್ತಾ ಬ್ಯಾರಿಕೇಡ್ಗಳನ್ನು ತಳ್ಳಲು ಮುಂದಾದರು. ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಭಾರಿ ಭದ್ರತೆ ವಹಿಸಲಾಗಿತ್ತು. ಹಲವಾರು ಬಸ್ಗಳನ್ನು ನಿಯೋಜಿಸಿ, ಸಂಸದರು ಸೇರಿದಂತೆ ಪಕ್ಷದ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡರು.