ಬರ್ಲಿನ್: ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜರ್ಮನಿ ಪ್ರವಾಸದಲ್ಲಿದೆ. ಜರ್ಮನಿಯ ಮ್ಯೂನಿಚ್ನಲ್ಲಿರುವ ವಿಶ್ವಪ್ರಸಿದ್ಧ ‘ಬಿಎಂಡಬ್ಲ್ಯೂ’ ಕಾರು ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ನಂತರ ರಾಹುಲ್ ಗಾಂಧಿ, ಭಾರತದ ಉತ್ಪಾದನಾ ಸಾಮರ್ಥ್ಯದ ಬಗ್ಗೆ ಮಾತನಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ರಾಹುಲ್ ಗಾಂಧಿ ಅವರ ಆರೋಪವೇನು ?
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಿಎಂಡಬ್ಲ್ಯೂ ಘಟಕದ ಭೇಟಿಯ ವೀಡಿಯೊ ಹಂಚಿಕೊಂಡಿರುವ ರಾಹುಲ್ ಗಾಂಧಿ, ಭಾರತದ ಆರ್ಥಿಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಯಾವುದೇ ಬಲವಾದ ಆರ್ಥಿಕತೆಗೆ ಉತ್ಪಾದನಾ ವಲಯವು ಬೆನ್ನೆಲುಬಾಗಿದೆ. ಆದರೆ ದುರಾದೃಷ್ಟವಶಾತ್ ಭಾರತದಲ್ಲಿ ಉತ್ಪಾದನಾ ಸಾಮರ್ಥ್ಯವು ಕುಸಿಯುತ್ತಿದೆ. ಉದ್ಯೋಗ ಸೃಷ್ಟಿಗೆ ಪೂರಕವಾದ ವಾತಾವರಣ ಭಾರತದಲ್ಲಿ ಇಲ್ಲದಿರುವುದು ಯುವಜನರ ಭವಿಷ್ಯಕ್ಕೆ ಅಡ್ಡಿಯಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಅಂಕಿಅಂಶಗಳ ಸಮೇತ ಬಿಜೆಪಿ ಪ್ರತ್ಯುತ್ತರ:
ರಾಹುಲ್ ಗಾಂಧಿ ಅವರ ಈ ಹೇಳಿಕೆಯನ್ನು ದೇಶ ವಿರೋಧಿ ರಾಗ ಎಂದು ಕರೆದಿರುವ ಬಿಜೆಪಿ ನಾಯಕರು, ಭಾರತದ ಬೆಳವಣಿಗೆಯ ಅಂಕಿಅಂಶಗಳನ್ನು ಮುಂದಿಟ್ಟು ತಿರುಗೇಟು ನೀಡಿದ್ದಾರೆ. ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಅವರು ಈ ಬಗ್ಗೆ ಎಕ್ಸ್ನಲ್ಲಿ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಅವರಿಗೆ ವಾಸ್ತವ ಜ್ಞಾನದ ಕೊರತೆಯಿದೆ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಬಿಜೆಪಿ ಮಂಡಿಸಿದ ಪ್ರಮುಖ ಅಂಶಗಳು ಹೀಗಿವೆ:
ಎಲೆಕ್ಟ್ರಾನಿಕ್ಸ್ ಕ್ರಾಂತಿ: ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಶೇ. 495ರಷ್ಟು ಅಭೂತಪೂರ್ವ ಬೆಳವಣಿಗೆ ಕಂಡಿದೆ ಮತ್ತು ರಫ್ತು ವಲಯದಲ್ಲಿ ಶೇ. 760ರಷ್ಟು ಪ್ರಗತಿಯಾಗಿದೆ.
ಆಟೋಮೊಬೈಲ್ ಹಬ್: 1991 ರಿಂದೀಚೆಗೆ ದೇಶೀಯ ವಾಹನಗಳ ಉತ್ಪಾದನೆಯು 14 ಪಟ್ಟು ಹೆಚ್ಚಾಗಿದೆ. ಭಾರತವು ಸದ್ಯದಲ್ಲೇ ಜಾಗತಿಕ ವಾಹನ ಉತ್ಪಾದನೆಯಲ್ಲಿ ಅಗ್ರಸ್ಥಾನಕ್ಕೇರಲಿದೆ.
ಭವಿಷ್ಯದ ಗುರಿ: 2030ರ ವೇಳೆಗೆ 5 ಕೋಟಿ ವಾಹನಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ. 2047ರ ವೇಳೆಗೆ ಭಾರತವು ವಿಶ್ವದ ಎರಡನೇ ಅತಿದೊಡ್ಡ ಆಟೋಮೊಬೈಲ್ ಉತ್ಪಾದನಾ ರಾಷ್ಟ್ರವಾಗಲಿದೆ.
ವಿದೇಶಿ ನೆಲದಲ್ಲಿ ನಿಂತು ಭಾರತದ ಆರ್ಥಿಕತೆಯನ್ನು ಟೀಕಿಸುವುದು ರಾಹುಲ್ ಗಾಂಧಿ ಅವರ ಹಳೆಯ ಚಾಳಿ ಎಂದು ಬಿಜೆಪಿ ಟೀಕಿಸಿದೆ. ಆದರೆ, ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಗೆ ಉತ್ಪಾದನಾ ವಲಯದ ಮಂದಗತಿಯೇ ಕಾರಣ ಎನ್ನುವುದು ಕಾಂಗ್ರೆಸ್ ವಾದವಾಗಿದೆ. ಬಿಜೆಪಿಯ ಈ ಪ್ರತಿಕ್ರಿಯೆಗೆ ರಾಹುಲ್ ಗಾಂಧಿ ಯಾವ ರೀರಿ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ.





