ನವದೆಹಲಿ, ಡಿ.30: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಅವರ ಪುತ್ರ ರೈಹಾನ್ ವಾದ್ರಾ ಅವರು ತಮ್ಮ ಗೆಳತಿ ಅವಿವಾ ಬೇಗ್ ಅವರೊಂದಿಗೆ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಕಳೆದ ಏಳು ವರ್ಷಗಳಿಂದ ಪರಸ್ಪರ ಪರಿಚಯ ಮತ್ತು ಸ್ನೇಹ ಹೊಂದಿರುವ ಈ ಜೋಡಿ, ಕುಟುಂಬಗಳ ಪೂರ್ಣ ಒಪ್ಪಿಗೆಯೊಂದಿಗೆ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದ್ದಾರೆ ಎನ್ನಲಾಗಿದೆ.
ಪ್ರಿಯಾಂಕಾ ಗಾಂಧಿ–ರಾಬರ್ಟ್ ವಾದ್ರಾ ಕುಟುಂಬ ಈ ವಿಷಯವನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೂ, ಮೂಲಗಳ ಪ್ರಕಾರ ಖಾಸಗಿಯಾಗಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ. ಈ ಸಮಾರಂಭಕ್ಕೆ ಎರಡೂ ಕುಟುಂಬಗಳ ಬಂಧುಗಳು ಹಾಗೂ ಆಪ್ತರನ್ನಷ್ಟೇ ಆಹ್ವಾನಿಸಲಾಗಿತ್ತು. ಮದುವೆ ದಿನಾಂಕ ಇನ್ನೂ ನಿಶ್ಚಯವಾಗಿಲ್ಲ ಎಂಬುದೂ ತಿಳಿದುಬಂದಿದೆ.
2000ರ ಆಗಸ್ಟ್ 29ರಂದು ಜನಿಸಿದ ರೈಹಾನ್, ಬಾಲ್ಯದಿಂದಲೇ ಕಲೆ ಮತ್ತು ಛಾಯಾಗ್ರಹಣದ ಕಡೆಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಅವರು ವೃತ್ತಿಪರವಾಗಿ ವಿಶ್ಯುಯಲ್ ಆರ್ಟಿಸ್ಟ್ ಹಾಗೂ ಫೋಟೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದಾರೆ.
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ರೈಹಾನ್, ಕೆಲ ರಾಜಕೀಯ ಕಾರ್ಯಕ್ರಮಗಳಲ್ಲಿ ಮಾತ್ರ ತಮ್ಮ ತಾಯಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಮುಂಬೈನ ಕೊಲಾಬಾದಲ್ಲಿರುವ ಸಮಕಾಲೀನ ಕಲಾ ಗ್ಯಾಲರಿಯಾದ APRÈ Art House ನಲ್ಲಿ ರೈಹಾನ್ ಅವರ ಜೀವನ ಚರಿತ್ರೆ ಮತ್ತು ಕಲಾ ಪೋರ್ಟ್‌ಫೋಲಿಯೊ ಲಭ್ಯವಿದೆ. ವನ್ಯಜೀವಿ, ಪ್ರಕೃತಿ ಮತ್ತು ಮಾನವ ಬದುಕಿನ ವಿವಿಧ ಆಯಾಮಗಳನ್ನು ಒಳಗೊಂಡ ಅವರ ಛಾಯಾಗ್ರಹಣ ಕಲೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ರೈಹಾನ್ ಅವರಿಗೆ ಮಿರಾಯಾ ವಾದ್ರಾ ಎಂಬ ಸಹೋದರಿ ಇದ್ದಾರೆ.
ರೈಹಾನ್ ಅವರ ಜೀವನ ಸಂಗಾತಿ ಅವಿವಾ ಬೇಗ್ ಯಾರು?
ಅವಿವಾ ಬೇಗ್ ಅವರು ದಿಲ್ಲಿ ಮೂಲದ ಛಾಯಾಗ್ರಾಹಕಿ ಮತ್ತು ನಿರ್ಮಾಪಕಿ. ಅವಿವಾ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ದೆಹಲಿಯ ಪ್ರತಿಷ್ಠಿತ ಮಾಡ್ರನ್ ಶಾಲೆ ಯಲ್ಲಿ ಪೂರ್ಣಗೊಳಿಸಿದ್ದಾರೆ. ನಂತರ ಅವರು ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದಿಂದ ಮಾಧ್ಯಮ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಅವಿವಾ ಅವರು ‘ದಿ ಇಲ್ಯೂಸರಿ ವರ್ಲ್ಡ್’ (2019) ಮತ್ತು ‘ಯು ಕ್ಯಾನ್ಟ್ ಮಿಸ್ ದಿಸ್’ (ಇಂಡಿಯಾ ಆರ್ಟ್ ಫೇರ್, 2023) ಸೇರಿದಂತೆ ಹಲವು ಪ್ರಮುಖ ಕಲಾ ಪ್ರದರ್ಶನಗಳಲ್ಲಿ ತಮ್ಮ ಕೃತಿಗಳನ್ನು ಪ್ರದರ್ಶಿಸಿದ್ದಾರೆ. ಇದಲ್ಲದೆ, ಅವರು ಮಾಜಿ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಆಟಗಾರ್ತಿಯೂ ಆಗಿದ್ದಾರೆ.





