ನಮ್ಮ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇತಿಹಾಸ ಸೃಷ್ಟಿಸಿದ್ದು, ಐಸಿಸಿ ಮಹಿಳಾ ವಿಶ್ವಕಪ್ ಗೆದ್ದು ಬೀಗಿದೆ. ಟೀಂ ಇಂಡಿಯಾದ ಮಹಿಳಾ ತಂಡ, ಕೋಚ್ ಅಮೋಲ್ ಮುಜುಂದಾರ್ ಅವರ ನೇತೃತ್ವದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.
ಈ ಸಮಯದಲ್ಲಿ ತಂಡದೊಂದಿಗೆ ಮೋದಿ ಮಾತುಕತೆ ನಡೆಸಿದರು. ಗಂಭೀರ ಚರ್ಚೆಯ ನಡುವೆಯೂ ತಮಾಷೆಯ ಕ್ಷಣಗಳು ಕೂಡ ಇದ್ದವು. ಸ್ಟೈಲಿಶ್ ಆಟಗಾರ್ತಿ ಹರ್ಲೀನ್ ಡಿಯೋಲ್ ಅವರು ಪ್ರಧಾನಿಯವರಿಗೆ ನೇರವಾಗಿ ಪ್ರಶ್ನೆಯೊಂದನ್ನು ಕೇಳಿದರು. “ಸರ್, ನಿಮ್ಮ ಚರ್ಮ ಯಾವಾಗಲೂ ಫಳಫಳವಾಗಿ ಹೊಳೆಯುತ್ತಿರುತ್ತದೆ. ನಿಮ್ಮ ಸ್ಕಿನ್ ಕೇರ್ ರೂಟೀನ್ ಏನು?” ಎಂದರು.. ಅವರ ಈ ಪ್ರಶ್ನೆಗೆ ಮೋದಿ ನಗುತ್ತಲೇ ಜಾಣ್ಮೆಯ ಉತ್ತರ ನೀಡಿದರು. “ನಾನು ಸರ್ಕಾರದ ಮುಖ್ಯಸ್ಥನಾಗಿ 25 ವರ್ಷಗಳೇ ಕಳೆದಿದ್ದೇನೆ. ನನ್ನನ್ನು ಪ್ರಕಾಶಮಾನವಾಗಿ ಇರಿಸಿರುವುದು ಬೇರೇನೂ ಅಲ್ಲ, ಅದು ಜನರ ಆಶೀರ್ವಾದ!” ಎಂದು ಹೇಳಿದರು.
ಇದೇ ರೀತಿಯ ಪ್ರಶ್ನೆ 2020ರಲ್ಲಿ ಯುವ ಸಾಧಕರೊಂದಿಗಿನ ಸಂವಾದದಲ್ಲಿ ಮೋದಿ ಅವರಿಗೆ ಎದುರಾಗಿತ್ತು. ಆಗ ಅವರು ತಮಾಷೆಯಾಗಿ ಹೇಳಿದ್ದರು. “ನನ್ನ ಹೊಳೆಯುವ ಮೈಬಣ್ಣದ ರಹಸ್ಯ ಬೇರೇನೂ ಅಲ್ಲ. ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತೇನೆ ಮತ್ತು ತುಂಬಾ ಬೆವರು ಸುರಿಸುತ್ತೇನೆ. ಅದರಿಂದಲೇ ನನ್ನ ಮುಖವನ್ನು ಮಸಾಜ್ ಮಾಡುತ್ತೇನೆ, ಅದೇ ನನಗೆ ಹೊಳಪು ಕೊಡುತ್ತದೆ!” ಎಂದು ಉತ್ತರಿಸಿದ್ದರು.
ಪ್ರಧಾನಿ ಮೋದಿ ಅವರು ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವನ್ನು ಹೃದಯಪೂರ್ವಕವಾಗಿ ಅಭಿನಂದಿಸಿದರು. ಪಂದ್ಯಾವಳಿಯಲ್ಲಿ ಸತತ ಮೂರು ಸೋಲುಗಳ ನಂತರವೂ ತಂಡ ತೋರಿದ ಅದ್ಭುತ ಪ್ರದರ್ಶನವನ್ನು ಶ್ಲಾಘಿಸಿದರು. “ಭಾರತದಲ್ಲಿ ಕ್ರಿಕೆಟ್ ಕೇವಲ ಆಟವಲ್ಲ, ಅದು ಜನರ ಜೀವನ. ನೀವು ಗೆದ್ದರೆ ಇಡೀ ದೇಶವೇ ಖುಷಿಪಡುತ್ತದೆ, ಒಳ್ಳೆಯದೆನಿಸುತ್ತದೆ” ಎಂದು ಹೇಳಿದರು.
ಈ ಗೆಲುವು ಭಾರತೀಯ ಮಹಿಳಾ ಕ್ರಿಕೆಟ್‌ಗೆ ಹೊಸ ಮೈಲುಗಲ್ಲಾಗಿದೆ. 2005 ಮತ್ತು 2017ರ ಫೈನಲ್‌ಗಳಲ್ಲಿ ಸೋತು, ಕಪ್ ಗೆಲ್ಲುವ ಕನಸು ಕೇವಲ ಕನಸಾಗಿಯೇ ಉಳಿದಿತ್ತು. ಆದರೆ ಈ ಬಾರಿ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ, ಮೊದಲ ಬಾರಿಗೆ ವಿಶ್ವಕಪ್ ಎತ್ತಿ ಹಿಡಿದರು. ತವರು ನೆಲದಲ್ಲಿಯೇ ಈ ಕೀರ್ತಿಗೆ ಪಾತ್ರರಾದರು. 17 ವರ್ಷಗಳ ಕಾಯುವಿಕೆಯು ಕೊನೆಗೊಂಡಿತು.
ಫೈನಲ್ ಪಂದ್ಯದ ಹೀರೋಗಳು, ಶಫಾಲಿ ಶರ್ಮಾ ಮತ್ತು ದೀಪ್ತಿ ಶರ್ಮಾ. ಶಫಾಲಿ 87 ರನ್ ಗಳಿಸಿ, 2 ವಿಕೆಟ್ ಪಡೆದರು (2/36). ದೀಪ್ತಿ 58 ರನ್ ಮತ್ತು 5 ವಿಕೆಟ್‌ಗಳೊಂದಿಗೆ (5/39) ಪಂದ್ಯವನ್ನು ದಕ್ಷಿಣ ಆಫ್ರಿಕಾದಿಂದ ಕಿತ್ತುಕೊಂಡರು. ಇವರ ಪ್ರದರ್ಶನ ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ.





