ಪಣಜಿ, ನವೆಂಬರ್ 28: ಗೋವಾ ಇಂದು ಐತಿಹಾಸಿಕ ಕ್ಷಣವೊಂದರ ಸಾಕ್ಷಿಯಾಗಲಿದೆ. ದಕ್ಷಿಣದ ಅಯೋಧ್ಯೆಯಾಗಿ ರೂಪುಗೊಳ್ಳುತ್ತಿರುವ ಪರ್ತಗಾಳಿಯ ಜೀವೋತ್ತಮ ಮಠದ ಆದರ್ಶ ಧಾಮ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಅತಿ ಎತ್ತರದ ಶ್ರೀರಾಮನ ಕಂಚಿನ ಮೂರ್ತಿಯನ್ನು ಇಂದು ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭವು ಶ್ರೀಮಠದ 550 ವರ್ಷಗಳ (ಸಾರ್ಧ ಪಂಚ ಶತಮಾನೋತ್ಸವ) ಗಂಭೀರ ಆಚರಣೆಯ ಭಾಗವಾಗಿದೆ.
ಈ 77 ಅಡಿ ಎತ್ತರದ ಪ್ರತಿಮೆಯು ಕೇವಲ ಒಂದು ಶಿಲ್ಪಕಲಾ ಅದ್ಭುತವಷ್ಟೇ ಅಲ್ಲ, ಭಕ್ತಿ ಮತ್ತು ಸಂಸ್ಕೃತಿಯ ಪ್ರಬಲ ಪ್ರತೀಕವೂ ಆಗಿದೆ. ಈ ಮೂರ್ತಿಯ ವಿಶೇಷತೆಯೆಂದರೆ, ಗುಜರಾತ್‌ನ ಸ್ಟ್ಯಾಚ್ಯೂ ಆಫ್ ಯೂನಿಟಿ ಮತ್ತು ಬೆಂಗಳೂರಿನ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಿಸಿದ ಪ್ರಖ್ಯಾತ ಶಿಲ್ಪಿ ಮತ್ತು ‘ಪದ್ಮಭೂಷಣ’ ಪುರಸ್ಕೃತ ಡಾ. ರಾಮ್ ವನ್ಜಿ ಸುತಾರ್ ಅವರೇ ಇದರ ಸೃಷ್ಟಿಕರ್ತ. ಅವರ ಕಲ್ಪನೆ ಮತ್ತು ಕಸುಬು ಈ ದಿವ್ಯ ಮೂರ್ತಿಗೆ ರೂಪು ನೀಡಿದೆ.
ಪ್ರಧಾನಿ ಮೋದಿ ಅವರು ಮೂರ್ತಿಯ ಲೋಕಾರ್ಪಣೆಯ ಜೊತೆಗೆ ಹಲವಾರು ಇತರ ಯೋಜನೆಗಳಿಗೂ ಚಾಲನೆ ನೀಡಲಿದ್ದಾರೆ. ಇಂದು ಶ್ರೀರಾಮನ ಮೂರ್ತಿಯನ್ನು ಕೇಂದ್ರವಾಗಿ ಹೊಂದಿರುವ ರಾಮಾಯಣ ಥೀಮ್ ಪಾರ್ಕ್, ಭಗವಾನ್ ಶ್ರೀರಾಮನ ಜೀವನ ಮತ್ತು ತತ್ವಗಳನ್ನು ಪ್ರದರ್ಶಿಸುವ ಒಂದು ವಸ್ತುಸಂಗ್ರಹಾಲಯ ಮತ್ತು ಆಧುನಿಕ ತಂತ್ರಜ್ಞಾನದ 7ಡಿ ರಂಗಮಂದಿರವನ್ನು ಉದ್ಘಾಟಿಲಿದ್ದಾರೆ.
ಶ್ರೀಮಠದ 550 ವರ್ಷಗಳ ಐತಿಹಾಸಿಕ ಸಾಧನೆಯನ್ನು ಗುರುತಿಸಿ, ಪ್ರಧಾನಿ ಮೋದಿ ಅವರು ಒಂದು ವಿಶೇಷ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಇದು ಈ ಆಚರಣೆಗೆ ರಾಷ್ಟ್ರೀಯ ಮಹತ್ವ ನೀಡುವ ಸಂಕೇತವಾಗಿದೆ.
ಈ ಸಾರ್ಧ ಪಂಚ ಶತಮಾನೋತ್ಸವದ ನಿಮಿತ್ತ, ಶ್ರೀಮದ್ ವಿದ್ಯಾಧೀಶತೀರ್ಥ ಶ್ರೀಪಾದ ಅವರು ದೇಶದ 120 ಕೇಂದ್ರಗಳಲ್ಲಿ 550 ಕೋಟಿ ಶ್ರೀರಾಮ ನಾಮ ಜಪ ಅಭಿಯಾನವನ್ನು ಪ್ರಾರಂಭಿಸಿದ್ದರು. ಈ ಅಭಿಯಾನ ಅಪಾರ ಪ್ರತಿಸ್ಪಂದನೆ ಪಡೆದು, 590 ಕೋಟಿಗೂ ಹೆಚ್ಚು ಬಾರಿ ರಾಮನಾಮ ಜಪ ನಡೆದು ಒಂದು ಅದ್ಭುತ ದಾಖಲೆಯನ್ನು ಸೃಷ್ಟಿಸಿದೆ.
ಶ್ರೀಕ್ಷೇತ್ರ ಬದರಿಯಿಂದ ಪ್ರಾರಂಭವಾಗಿ 40 ದಿನಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿದ ‘ಶ್ರೀರಾಮ ದಿಗ್ವಿಜಯ ರಥಯಾತ್ರೆ’ ಇಂದು ಪರ್ತಗಾಳಿ ಮಠವನ್ನು ತಲುಪಿ, ತನ್ನ ಐತಿಹಾಸಿಕ ಯಾತ್ರೆಯನ್ನು ಪೂರ್ಣಗೊಳಿಸಿದೆ. ಈ ರಥಯಾತ್ರೆಯು ಭಗವಾನ್ ಶ್ರೀರಾಮನ ಸಂದೇಶವನ್ನು ದೇಶದೆಂಟೂ ತುಂಬ ಹರಡಿತು.
ಹನ್ನೊಂದು ದಿನಗಳ ಕಾಲ ನಡೆಯುತ್ತಿರುವ ಈ ವಿಶೇಷೋತ್ಸವದಲ್ಲಿ, ಪ್ರತಿದಿನ 55 ರಂತೆ ಒಟ್ಟು 550 ವೇದಿಕೆಗಳಲ್ಲಿ ಹೋಮ-ಹವನಗಳು ನಡೆಯಲಿವೆ. ಈ ಧಾರ್ಮಿಕ ಅನುಷ್ಠಾನಗಳು ಪರಿಸರವನ್ನು ಪವಿತ್ರಗೊಳಿಸಿ, ಜಗತ್ತಿನ ಕಲ್ಯಾಣವನ್ನು ಕೋರುತ್ತಿವೆ.ಉಡುಪಿಯಲ್ಲಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಂತರ ಪ್ರಧಾನಿ ಮೋದಿ ಗೋವಾಕ್ಕೆ ತೆರಳಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.





