ಭಾರತದ ವಿರುದ್ಧ ಸದಾ ಕುತಂತ್ರ ರೂಪಿಸುವ ಪಾಕಿಸ್ತಾನ ಇದೀಗ ಮತ್ತೊಂದು ಹೊಸ ಕಿರಿಕ್ ಆರಂಭಿಸಿದಂತೆ ಕಾಣುತ್ತಿದೆ. ಪಾಕಿಸ್ತಾನದ ರಹಸ್ಯ ವಾಯುನೆಲೆಗಳಿಂದ ಹೊರಬಿದ್ದಿರುವ ವರದಿಗಳು ಭಾರತೀಯ ಭದ್ರತಾ ಪಡೆಗಳಲ್ಲಿ ಆತಂಕ ಹಾಗೂ ತೀವ್ರ ಕುತೂಹಲ ಮೂಡಿಸಿವೆ.
ಪಾಕ್ ಏರ್ಬೇಸ್ನಲ್ಲಿ ಚೀನಾ-ಟರ್ಕಿ ವಿಮಾನಗಳು ಭಾರತಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷ ಶತ್ರುಗಳಂತೆ ವರ್ತಿಸುವ ಚೀನಾ ಮತ್ತು ಟರ್ಕಿ ದೇಶಗಳ ಮಿಲಿಟರಿ ವಿಮಾನಗಳು ಬ್ಯಾಕ್ ಟು ಬ್ಯಾಕ್ ಪಾಕಿಸ್ತಾನದ ಏರ್ಬೇಸ್ಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಹಲವು ನೂತನ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೇವಲ ಕೆಲವೇ ಗಂಟೆಗಳ ಅವಧಿಯಲ್ಲಿ ಈ ಎರಡು ದೇಶಗಳ ಸರಕು ಸಾಗಣೆ ವಿಮಾನಗಳು ಇಳಿದಿರುವುದು ಗಡಿ ಭಾಗದಲ್ಲಿ ಸಂಚಲನ ಮೂಡಿಸಿದೆ.
ಬ್ಯಾರಕ್ತಾರ್ ಡ್ರೋನ್ ಪಡೆದ ಪಾಕಿಸ್ತಾನ? ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ರಷ್ಯಾದ ಭಾರೀ ಮಿಲಿಟರಿ ತುಕಡಿಗಳನ್ನೇ ನಡುಗಿಸಿದ್ದ ಟರ್ಕಿ ನಿರ್ಮಿತ ‘ಬ್ಯಾರಕ್ತಾರ್ TB-2’ (Bayraktar TB2) ಡ್ರೋನ್ಗಳು ಇದೀಗ ಪಾಕಿಸ್ತಾನದ ಬತ್ತಳಿಕೆಯನ್ನು ಸೇರುತ್ತಿವೆಯೇ ಎಂಬ ಸಂಶಯ ವ್ಯಕ್ತವಾಗಿದೆ. ಪಾಕ್ ಮತ್ತೆ ಪಹಲ್ಗಾಮ್ ಮಾದರಿಯ ಭೀಕರ ದಾಳಿಗೆ ಯೋಜನೆ ರೂಪಿಸುತ್ತಿದೆಯೇ ಎಂಬ ಪ್ರಶ್ನೆ ರಕ್ಷಣಾ ವಲಯದಲ್ಲಿ ಕಾಡುತ್ತಿದೆ.
ಟೆರರ್ ಕ್ಯಾಂಪ್ ನಿರ್ಮಾಣಕ್ಕೆ 25 ಕೋಟಿ! “ನಮಗೂ ಉಗ್ರರಿಗೂ ಯಾವುದೇ ಸಂಬಂಧವಿಲ್ಲ” ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಟಕವಾಡುವ ಪಾಕಿಸ್ತಾನ, ಇದೀಗ ಉಗ್ರಗಾಮಿಗಳ ಕ್ಯಾಂಪ್ಗಳನ್ನು ಪುನರ್ನಿರ್ಮಿಸಲು 25 ಕೋಟಿ ರೂಪಾಯಿ ನೀಡಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇದರ ಜೊತೆಗೆ ಬಾಂಗ್ಲಾದೇಶದ ಇತ್ತೀಚಿನ ರಾಜಕೀಯ ಬದಲಾವಣೆಗಳ ಹಿನ್ನೆಲೆಯಲ್ಲಿ, ಬಾಂಗ್ಲಾ ಗಡಿಯ ಮೇಲೆಯೂ ಭಾರತೀಯ ಸೇನೆ ಹದ್ದಿನ ಕಣ್ಣಿಟ್ಟಿದೆ.
ಚೀನಾಗೆ ಅಜಿತ್ ದೋವಲ್ ಭೇಟಿ
ತೀವ್ರ ಕುತೂಹಲ ಗಡಿಯಲ್ಲಿ ಇಷ್ಟೆಲ್ಲಾ ಸಶಸ್ತ್ರ ಚಟುವಟಿಕೆಗಳು ನಡೆಯುತ್ತಿರುವ ಬೆನ್ನಲ್ಲೇ, ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಅವರು ಚೀನಾಗೆ ದಿಢೀರ್ ಭೇಟಿ ನೀಡಿರುವುದು ತೀವ್ರ ಆಶ್ಚರ್ಯ ಹಾಗೂ ರಾಜತಾಂತ್ರಿಕ ಕುತೂಹಲಕ್ಕೆ ಕಾರಣವಾಗಿದೆ.
ಪ್ರಸ್ತುತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತೀಯ ರಕ್ಷಣಾ ಸಚಿವಾಲಯವು, ಗಡಿಯಲ್ಲಿ ಯಾವುದೇ ರೀತಿಯ ದುಸ್ಸಾಹಸವನ್ನು ಮಟ್ಟಹಾಕಲು ಭಾರತೀಯ ಸೇನೆಗೆ ಸಂಪೂರ್ಣ ಸಿದ್ಧರಾಗಿರುವಂತೆ ‘ಹೈ ಅಲರ್ಟ್’ ಸೂಚನೆ ನೀಡಿದೆ.





