ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭಾ ಅಧಿವೇಶನದಲ್ಲಿ ಆಪರೇಷನ್ ಮಹಾದೇವ್ ಕಾರ್ಯಾಚರಣೆಯ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ರೂವಾರಿ ಸುಲೇಮಾನ್ ಸೇರಿದಂತೆ ಮೂವರು ಉಗ್ರರಾದ ಅಫ್ಘಾನ್ ಮತ್ತು ಜಿಬ್ರಾನ್‌ರನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈಯಲಾಗಿದೆ ಎಂದು ಅವರು ಘೋಷಿಸಿದ್ದಾರೆ. ಈ ಕಾರ್ಯಾಚರಣೆಯು ಪಹಲ್ಗಾಮ್ ದಾಳಿಯ ದಿನವೇ ಆರಂಭವಾಗಿತ್ತು ಎಂದು ಅಮಿತ್ ಶಾ ತಿಳಿಸಿದ್ದಾರೆ.
ಪಹಲ್ಗಾಮ್ ದಾಳಿಯ ದಿನ ಸಂಜೆ ಅಮಿತ್ ಶಾ ಶ್ರೀನಗರಕ್ಕೆ ತಲುಪಿದ್ದರು. ಅದೇ ದಿನ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಭಯೋತ್ಪಾದಕರು ದೇಶ ಬಿಟ್ಟು ಪಲಾಯನ ಮಾಡದಂತೆ ತಡೆಯುವ ನಿರ್ಧಾರ ಕೈಗೊಳ್ಳಲಾಗಿತ್ತು. ಇದರ ಫಲವಾಗಿ ಆಪರೇಷನ್ ಮಹಾದೇವ್ ಕಾರ್ಯಾಚರಣೆ ಆರಂಭವಾಯಿತು. ಸುಲೇಮಾನ್ ಈ ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದು, ಅಫ್ಘಾನ್ ಮತ್ತು ಜಿಬ್ರಾನ್ ಆತನ ಸಹಚರರಾಗಿದ್ದರು ಎಂದು ಅಮಿತ್ ಶಾ ಸದನಕ್ಕೆ ಮಾಹಿತಿ ನೀಡಿದ್ದಾರೆ.
ಈ ಮೂವರು ಉಗ್ರರು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಪ್ರಮುಖ ಸದಸ್ಯರಾಗಿದ್ದರು. ಪಹಲ್ಗಾಮ್ ದಾಳಿಯಲ್ಲಿ 26 ಜನರ ಸಾವಿಗೆ ಇವರೇ ಕಾರಣರಾಗಿದ್ದರು. ಭಯೋತ್ಪಾದಕರಿಗೆ ಆಶ್ರಯ ನೀಡಿದವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಈಗಾಗಲೇ ಬಂಧಿಸಿದೆ. ತಾಂತ್ರಿಕ ಸಹಾಯದೊಂದಿಗೆ ಈ ಉಗ್ರರನ್ನು ಗುರಿಯಾಗಿಸಿ ಕೊಲ್ಲಲಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ದಾರಾ ಬಳಿಯ ಲಿಡ್ವಾಸ್ ಪ್ರದೇಶದಲ್ಲಿ ಶಂಕಿತ ಭಯೋತ್ಪಾದಕರ ಚಲನವಲನದ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಆಧಾರದ ಮೇಲೆ ಭಾರತೀಯ ಸೇನೆ ಆಪರೇಷನ್ ಮಹಾದೇವ್ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಡಚಿಗಮ್ ರಾಷ್ಟ್ರೀಯ ಉದ್ಯಾನವನದ ಬಳಿಯ ಹರ್ವಾನ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ತೀವ್ರ ಗುಂಡಿನ ಚಕಮಕಿ ನಡೆಯಿತು. ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ, CRPF ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಭಾಗವಹಿಸಿದ್ದರು. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಈ ಎನ್‌ಕೌಂಟರ್ ಕ್ಷಿಪ್ರವಾಗಿ ನಡೆಯಿತು. ಈ ಯಶಸ್ವಿ ಕಾರ್ಯಾಚರಣೆಗೆ ಭದ್ರತಾ ಪಡೆಗಳ ಶ್ರಮ ಮತ್ತು ಒಗ್ಗಟ್ಟಿನ ಕೆಲಸವೇ ಕಾರಣವಾಗಿದೆ ಎಂದು ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.