ಚಂಡೀಗಢ, ಜ.21: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕೆಂಬ ಆಸೆಯು ಅನೇಕ ಯುವಕರನ್ನು ಪ್ರಾಣಾಪಾಯಕಾರಿ ಸಾಹಸಗಳತ್ತ ದೂಡುತ್ತೆ. ಕೆಲ ಸೆಕೆಂಡುಗಳ ರೀಲ್ಸ್ ಹಾಗೂ ಲೈಕ್ಸ್‌ಗಾಗಿ ಜೀವದ ಹಂಗು ತೊರೆದು ಸಾಹಸ ಪ್ರದರ್ಶಿಸುವ ಪ್ರವೃತ್ತಿ ದಿನೇದಿನೇ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲೇ ಹರಿಯಾಣದ ಹಿಸಾರ್‌ನಲ್ಲಿ ನಡೆದ ಒಂದು ಘಟನೆ ದೇಶಾದ್ಯಂತ ಗಮನ ಸೆಳೆದಿದೆ.
ಹರಿಯಾಣದ ಹಿಸಾರ್‌ನಲ್ಲಿರುವ ಐಕಾನಿಕ್ ಒಪಿ ಜಿಂದಾಲ್ ಟವರ್ ಮೇಲೆ ಯುವಕನೊಬ್ಬ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಅಪಾಯಕಾರಿ ಸ್ಟಂಟ್ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಸುಮಾರು 282 ಅಡಿ ಎತ್ತರದ ಈ ಟವರ್ ನಗರದ ಪ್ರಮುಖ ಗುರುತಾಗಿದ್ದು, ಅಲ್ಲಿ ನಡೆದ ಈ ಸಾಹಸ ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿದೆ.
ರಾಜಸ್ಥಾನದ ಮೋನು ಎಂಬ ಯುವಕ ಈ ಅಪಾಯಕಾರಿ ಸಾಹಸಕ್ಕೆ ಕೈಹಾಕಿದ್ದಾನೆ ಎಂದು ತಿಳಿದುಬಂದಿದೆ. ಯಾವುದೇ ಹಗ್ಗ, ಹೆಲ್ಮೆಟ್ ಅಥವಾ ರಕ್ಷಣಾ ಉಪಕರಣಗಳಿಲ್ಲದೆ ಟವರ್‌ನ ಅತಿ ಎತ್ತರದ ತುದಿಗೆ ಹತ್ತಿ, ಅಲ್ಲೇ ನಿಂತುಕೊಂಡು ಸ್ಟಂಟ್ ಪ್ರದರ್ಶಿಸಿದ್ದಾನೆ. ವಿಡಿಯೋದಲ್ಲಿ ಯುವಕ ಟವರ್‌ನ ಕಿರಿದಾದ ಜಾಗದಲ್ಲಿ ನಿಂತು ಕೈಗಳಿಂದ ಮಾತ್ರ ಟವರ್ ಹಿಡಿದು ನೇತಾಡುತ್ತಿರುವ ದೃಶ್ಯಗಳು ಕಾಣುತ್ತವೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಯುವಕ ತನ್ನೊಂದಿಗೆ ಬಿಯರ್ ಬಾಟಲ್‌ಗಳು ಮತ್ತು ಕ್ಯಾನ್‌ಗಳನ್ನು ಹೊಂದಿರುವ ಚೀಲವನ್ನೂ ಹೊತ್ತುಕೊಂಡಿದ್ದ. ಆತ ಟವರ್‌ನ ತುದಿಯಲ್ಲಿ ಬಿಯರ್ ಬಾಟಲ್‌ಗಳನ್ನು ಇಟ್ಟು ಅದರ ಮೇಲೆಯೇ ನಿಂತುಕೊಂಡು ಸಾಹಸ ಪ್ರದರ್ಶಿಸಿದ್ದಾನೆ.
ಈ ಘಟನೆಯನ್ನು ಗಮನಿಸಿದ ಒಪಿ ಜಿಂದಾಲ್ ಟವರ್‌ನ ಭದ್ರತಾ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ವೇಳೆ ಯುವಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಕ್ಷಮೆಯಾಚಿಸಿದ್ದಾನೆ. ಇನ್ನು ಮುಂದೆ ಈ ರೀತಿಯ ಅಪಾಯಕಾರಿ ಕೃತ್ಯಗಳನ್ನು ಪುನರಾವರ್ತಿಸುವುದಿಲ್ಲ ಎಂದು ಪೊಲೀಸರಿಗೆ ಭರವಸೆ ನೀಡಿದ್ದಾನೆ.
ಪೊಲೀಸರು ಈ ರೀತಿಯ ಸಾಹಸಗಳು ಕಾನೂನುಬಾಹಿರವಾಗಿದ್ದು, ಸಾರ್ವಜನಿಕ ಸುರಕ್ಷತೆಗೆ ಧಕ್ಕೆಯುಂಟುಮಾಡುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಘಟನೆ ಬಳಿಕ, ಮುಂದಿನ ದಿನಗಳಲ್ಲಿ ಇಂತಹ ಉಲ್ಲಂಘನೆಗಳನ್ನು ತಡೆಯುವ ಉದ್ದೇಶದಿಂದ ಒಪಿ ಜಿಂದಾಲ್ ಟವರ್‌ನ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ಆರಂಭಿಸಲಾಗಿದೆ. ಟವರ್ ಸುತ್ತಲೂ ಹೆಚ್ಚುವರಿ ಭದ್ರತಾ ಕ್ರಮಗಳು, ನಿಗಾವ್ಯವಸ್ಥೆ ಮತ್ತು ಪ್ರವೇಶ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವ ಕುರಿತು ಸ್ಥಳೀಯ ಆಡಳಿತ ಚಿಂತನೆ ನಡೆಸುತ್ತಿದೆ.





