ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇರಾನ್ ಪ್ರತೀಕಾರ ದಾಳಿಗಳು ಮುಂದುವರೆಯುತ್ತಿವೆ. ಒಮನ್ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ಮಾನವರಹಿತ ಡ್ರೋನ್ ಹಡಗು ಡಿಕ್ಕಿ ಹೊಡೆದ ದಾಳಿಯಲ್ಲಿ ಓರ್ವ ಭಾರತೀಯ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇದು ಇರಾನ್‌ನ ಪ್ರತೀಕಾರ ದಾಳಿಗಳಲ್ಲಿ ಮೊದಲ ಭಾರತೀಯ ಪ್ರಜೆಯ ಸಾವಾಗಿದೆ ಎಂದು ವರದಿಗಳು ತಿಳಿಸಿವೆ.
ಘಟನೆಯ ವಿವರ : ಸುಲ್ತಾನ್ ಕಬೂಸ್ ಬಂದರು (Sultan Qaboos Port) ಬಳಿ ಈ ದಾಳಿ ನಡೆದಿದೆ. ಮಾನವರಹಿತ ಡ್ರೋನ್ ಹಡಗು ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಮುಖ್ಯ ಎಂಜಿನ್ ಕೋಣೆಯಲ್ಲಿ ಬೆಂಕಿ ಮತ್ತು ಸ್ಫೋಟ ಸಂಭವಿಸಿದೆ. ದಾಳಿಯಿಂದಾಗಿ ಹಡಗಿನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಎಲ್ಲಾ ಸಿಬ್ಬಂದಿಯನ್ನು ತುರ್ತಾಗಿ ಸ್ಥಳಾಂತರಿಸಬೇಕಾಯಿತು.
ಹಡಗಿನಲ್ಲಿ ಒಟ್ಟು 21 ಮಂದಿ ಸಿಬ್ಬಂದಿ ಇದ್ದರು, 16 ಭಾರತೀಯರು, 4 ಬಾಂಗ್ಲಾದೇಶಿಯರು, 1 ಉಕ್ರೇನಿಯನ್ ಬದುಕುಳಿದವರನ್ನು ಪನಾಮ ಧ್ವಜದ ಅಡಿಯಲ್ಲಿ ಸಾಗುವ ಮತ್ತೊಂದು ವ್ಯಾಪಾರಿ ಹಡಗಿಗೆ ಸ್ಥಳಾಂತರಿಸಲಾಗಿದೆ. ಆದರೆ ದಾಳಿಯಲ್ಲಿ ಓರ್ವ ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಒಮನ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಹಿನ್ನೆಲೆ: ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯ ಹತ್ಯೆಯ ನಂತರ ಇರಾನ್ ಪ್ರತೀಕಾರಕ್ಕೆ ಶಪಥ ಮಾಡಿದೆ. ಹಾರ್ಮುಜ್ ಜಲಸಂಧಿ ಮತ್ತು ಒಮನ್ ಕರಾವಳಿಯಲ್ಲಿ ಸಾಗುವ ತೈಲ ಟ್ಯಾಂಕರ್‌ಗಳ ಮೇಲೆ ಇದು ಎರಡನೇ ದಾಳಿಯಾಗಿದೆ. ಈ ದಾಳಿಗಳು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿವೆ ಮತ್ತು ಜಾಗತಿಕ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಘಟನೆಯ ನಂತರ ಒಮನ್ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಸಮುದ್ರ ಮಾರ್ಗದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಈ ಘಟನೆಯಿಂದ ಭಾರತದಲ್ಲಿ ಆತಂಕ ವ್ಯಕ್ತವಾಗಿದ್ದು, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಥಳೀಯ ಭಾರತೀಯ ದೂತಾಲಯಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿದೆ.





