ಉತ್ತರಪ್ರದೇಶದ ಅಮ್ರೊಹಾ ಜಿಲ್ಲೆಯಲ್ಲಿ ಒಂದು ಅಚ್ಚರಿಯ ಮದುವೆ ಸುದ್ದಿಯಾಗಿದೆ. 30 ವರ್ಷದ ಮೂರು ಮಕ್ಕಳ ತಾಯಿಯೊಬ್ಬಳು ತನ್ನ ಮೂಲ ಧರ್ಮವಾದ ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡು, 12ನೇ ತರಗತಿಯಲ್ಲಿ ಓದುತ್ತಿರುವ 18 ವರ್ಷದ ವಿದ್ಯಾರ್ಥಿಯೊಂದಿಗೆ ಮದುವೆಯಾಗಿದ್ದಾಳೆ. ಈ ಘಟನೆ ಈಗ ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರೀತಿ ಮತ್ತು ಮದುವೆಯ ವಿಚಿತ್ರ ಕತೆಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿವೆ. ಯಾರಿಗೆ ಯಾರ ಮೇಲೆ ಪ್ರೀತಿ ಮೂಡುತ್ತದೆ ಎಂಬುದು ಊಹಿಸಲಾಗದಷ್ಟು ವಿಚಿತ್ರವಾಗಿದೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ತೆರಳಿ ಮದುವೆಯಾದವರು, ಮಗಳಿಗೆ ನಿಶ್ಚಯವಾದ ಹುಡುಗನ ಜೊತೆ ತಾಯಿಯೇ ಓಡಿಹೋದ ಉದಾಹರಣೆಗಳು, ಪ್ರಿಯತಮನಿಗಾಗಿ ಗಂಡನನ್ನು ಕೊಂದವರು—ಇಂತಹ ಹಲವು ಘಟನೆಗಳು ಸುದ್ದಿಯಾಗಿವೆ. ಈಗ ಈ ಪಟ್ಟಿಗೆ ಉತ್ತರಪ್ರದೇಶದ ಈ ಘಟನೆಯೂ ಸೇರಿದೆ.
ಹಸನ್‌ಪುರದ ಸರ್ಕಲ್ ಆಫೀಸರ್ ದೀಪಕ್ ಕುಮಾರ್ ಪಂತ್ ಪ್ರಕಾರ, ಈ ಮಹಿಳೆಯ ಮೂಲ ಹೆಸರು ಶಬ್ನಮ್. 30 ವರ್ಷದ ಈಕೆ ತನ್ನ ಪೋಷಕರ ಜೊತೆ ವಾಸಿಸುತ್ತಿದ್ದಳು ಮತ್ತು ಈಗಾಗಲೇ ಎರಡು ಮದುವೆಗಳಾಗಿದ್ದವು. ಮೊದಲಿಗೆ ಮೀರತ್‌ನ ಒಬ್ಬ ವ್ಯಕ್ತಿಯನ್ನು ಮದುವೆಯಾದ ಶಬ್ನಮ್, ನಂತರ ಡಿವೋರ್ಸ್ ಪಡೆದಿದ್ದಳು. ಎರಡನೇ ಮದುವೆಯಲ್ಲಿ ತೌಫಿಕ್ ಎಂಬಾತನನ್ನು ವಿವಾಹವಾದ ಈಕೆ, ಸೈಂಡನವಾಲಾದಲ್ಲಿ ವಾಸಿಸುತ್ತಿದ್ದಳು. 2011ರಲ್ಲಿ ತೌಫಿಕ್ ಅಪಘಾತದಲ್ಲಿ ಕೈ-ಕಾಲು ಕಳೆದುಕೊಂಡಾಗ, ಶಬ್ನಮ್ ಆತನನ್ನು ತೊರೆದು ಬಂದಿದ್ದಳು. ಇತ್ತೀಚೆಗೆ 12ನೇ ತರಗತಿಯಲ್ಲಿ ಓದುತ್ತಿರುವ 18 ವರ್ಷದ ಯುವಕನ ಜೊತೆ ಸಂಬಂಧ ಬೆಳೆಸಿ, ಅವನಿಗಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ತನ್ನ ಹೆಸರನ್ನು ಶಿವಾನಿ ಎಂದು ಬದಲಾಯಿಸಿಕೊಂಡಿದ್ದಾಳೆ.
ಉತ್ತರಪ್ರದೇಶದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಕಾನೂನುಬಾಹಿರ ಮತಾಂತರಕ್ಕೆ ಅವಕಾಶವಿಲ್ಲ. ಆದರೆ, ಈ ನಿಯಮದ ನಡುವೆಯೂ ಶಬ್ನಮ್ ಶಿವಾನಿಯಾಗಿ ಬದಲಾಗಿ, ಈ ವಿದ್ಯಾರ್ಥಿಯೊಂದಿಗೆ ಮದುವೆಯಾಗಿದ್ದಾಳೆ. ಈ ಘಟನೆ ಕಾನೂನಿನ ದೃಷ್ಟಿಯಿಂದ ಚರ್ಚೆಗೆ ಒಳಗಾಗಿದೆಯಾದರೂ, ಇದರ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಬರಬೇಕಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ 12ನೇ ತರಗತಿಯ ಯುವಕನ ತಂದೆ, “ನನ್ನ ಮಗನ ಈ ನಿರ್ಧಾರವನ್ನು ಸಂತೋಷದಿಂದ ಒಪ್ಪಿಕೊಂಡಿದ್ದೇನೆ. ಇದರಿಂದ ನಮ್ಮ ಕುಟುಂಬಕ್ಕೆ ಖುಷಿಯಾಗಿದೆ. ಈ ಜೋಡಿ ಸಂತೋಷದಿಂದ ಇದ್ದಾರೆ. ಅವರು ಒಟ್ಟಿಗೆ ಕೊನೆಯತನಕ ಸಂತೋಷದಿಂದ ಬಾಳಲಿ ಎಂಬುದೇ ನಮ್ಮ ಆಸೆ” ಎಂದು ಹೇಳಿದ್ದಾರೆ.
ಈ ಮದುವೆ ರಾಷ್ಟ್ರಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. 30 ವರ್ಷದ ಮೂರು ಮಕ್ಕಳ ತಾಯಿ, 18 ವರ್ಷದ ವಿದ್ಯಾರ್ಥಿಯೊಂದಿಗೆ ಮತಾಂತರಗೊಂಡು ಮದುವೆಯಾದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.