ಭುವನೇಶ್ವರ: ತಿಂಡಿ ಪ್ಯಾಕೆಟ್ ಒಳಗಿದ್ದ ಪುಟ್ಟ ಆಟಿಕೆಯೊಂದು ಸ್ಫೋಟಗೊಂಡ ಪರಿಣಾಮ ಎಂಟು ವರ್ಷದ ಬಾಲಕನೊಬ್ಬ ತನ್ನ ಒಂದು ಕಣ್ಣಿನ ದೃಷ್ಟಿಯನ್ನು ಶಾಶ್ವತವಾಗಿ ಕಳೆದುಕೊಂಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಮಕ್ಕಳ ಆಸೆಗಾಗಿ ನಾವು ಕೊಡಿಸುವ ಐದು-ಹತ್ತು ರೂಪಾಯಿಯ ತಿಂಡಿ ಪ್ಯಾಕೆಟ್‌ಗಳು ಎಷ್ಟು ಅಪಾಯ ಎಂಬುದಕ್ಕೆ ಈ ಘಟನೆ ಪ್ರತ್ಯೆಕ್ಷ ಸಾಕ್ಷಿಯಾಗಿದೆ.
ಘಟನೆಯ ವಿವರ
ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಭಾನುವಾರ (ಜ.11) ಎಂಟು ವರ್ಷದ ಬಾಲಕನೊಬ್ಬ ಸ್ಥಳೀಯ ಅಂಗಡಿಯಿಂದ ಐದು ರೂಪಾಯಿ ಬೆಲೆಯ ‘ಲೈಟ್ ಹೌಸ್’ (Light House) ಎಂಬ ಹೆಸರಿನ ಕಾರ್ನ್ ಪಫ್ಸ್ ಪ್ಯಾಕೆಟ್ ಖರೀದಿಸಿದ್ದನು. ತಿಂಡಿ ತಿಂದ ನಂತರ, ಪ್ಯಾಕೆಟ್ ಒಳಗೆ ಉಚಿತವಾಗಿ ಸಿಕ್ಕಿದ್ದ ಸಣ್ಣ ಆಟಿಕೆಯನ್ನು ತೆಗೆದು ಆಟವಾಡಲು ಶುರು ಮಾಡಿದ್ದಾನೆ. ಆದರೆ, ದುರದೃಷ್ಟವಶಾತ್ ಆ ಆಟಿಕೆಯು ಬಾಲಕನ ಕೈಯಲ್ಲಿದ್ದಾಗಲೇ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ.
ಛಿದ್ರಗೊಂಡ ಕಣ್ಣುಗುಡ್ಡೆ
ಸ್ಫೋಟದ ತೀವ್ರತೆಗೆ ಆಟಿಕೆಯ ಚೂರುಗಳು ನೇರವಾಗಿ ಬಾಲಕನ ಕಣ್ಣಿಗೆ ಬಡಿದಿವೆ. ಇದರಿಂದ ಬಾಲಕನ ಕಣ್ಣುಗುಡ್ಡೆ ಛಿದ್ರವಾಗಿದ್ದು, ತೀವ್ರ ರಕ್ತಸ್ರಾವವಾಗಿದೆ. ತಕ್ಷಣವೇ ಪೋಷಕರು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು, ಕಣ್ಣಿಗೆ ಗಂಭೀರ ಹಾನಿಯಾಗಿದ್ದು ಬಾಲಕ ಶಾಶ್ವತವಾಗಿ ಕಣ್ಣಿನ ದೃಷ್ಠಿಕಳೆದುಕೊಂಡಿದ್ದಾನೆ ಎಂದು ದೃಡಪಡಿಸಿದ್ದಾರೆ.
ಈ ಘಟನೆಯಿಂದ ತೀವ್ರ ಆಕ್ರೋಶಗೊಂಡ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಕ್ಕಳನ್ನು ಆಕರ್ಷಿಸಲು ಇಂತಹ ಅಪಾಯಕಾರಿ ಆಟಿಕೆಗಳನ್ನು ತಿಂಡಿ ಪ್ಯಾಕೆಟ್‌ಗಳಲ್ಲಿ ಹಾಕುವುದು ಎಷ್ಟು ಸರಿ ? ಎಂದು ಪ್ರಶ್ನಿಸಿದ್ದಾರೆ. ಸಂಬಂಧಪಟ್ಟ ತಯಾರಿಕಾ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಇಂತಹ ಮಾರಕ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ತಕ್ಷಣವೇ ನಿಷೇಧಿಸಬೇಕು ಮತ್ತು ಗಾಯಗೊಂಡ ಮಗುವಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಪೋಷಕರು ಸರ್ಕಾರಕ್ಕೆ ಮನವಿ ಮಾಡಿದ್ದಾಗರೆ.
ಸಾಮಾನ್ಯವಾಗಿ ಚಿಪ್ಸ್ ಮತ್ತು ಕಾರ್ನ್ ಪಫ್ಸ್ ಪ್ಯಾಕೆಟ್‌ಗಳಲ್ಲಿ ಮಕ್ಕಳನ್ನು ಸೆಳೆಯಲು ಸಣ್ಣ ಸಣ್ಣ ಪ್ಲಾಸ್ಟಿಕ್ ಆಟಿಕೆಗಳು, ಶಿಳ್ಳೆಗಳು ಅಥವಾ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ನೀಡಲಾಗುತ್ತದೆ. ಇವುಗಳ ಗುಣಮಟ್ಟದ ಬಗ್ಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಅಗ್ಗದ ದರದ ಪ್ಲಾಸ್ಟಿಕ್ ಅಥವಾ ಅಪಾಯಕಾರಿ ಕೆಮಿಕಲ್‌ಗಳಿಂದ ತಯಾರಿಸಿದ ಇಂತಹ ವಸ್ತುಗಳು ಮಕ್ಕಳ ಪ್ರಾಣಕ್ಕೇ ಕುತ್ತು ತರಬಹುದು. ಪೋಷಕರು ಇಂತಹ ಪ್ಯಾಕೆಟ್‌ಗಳನ್ನು ಮಕ್ಕಳಿಗೆ ನೀಡುವ ಮೊದಲು ಜಾಗರೂಕರಾಗಿರುವುದು ಅವಶ್ಯಕ.





