ನವದೆಹಲಿ: ಭಾರತದ ಆರ್ಥಿಕತೆ ಸದೃಢವಾಗಿ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿ ದೇಶದ ನೇರ ತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಅಂಕಿ-ಅಂಶಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ (ಏಪ್ರಿಲ್ 1, 2025 ರಿಂದ ಡಿಸೆಂಬರ್ 17 ರವರೆಗೆ) ಭಾರತದ ನಿವ್ವಳ ನೇರ ತೆರಿಗೆ ಸಂಗ್ರಹವು 17.04 ಲಕ್ಷ ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ. ಇದು ಕಳೆದ ವರ್ಷಕ್ಕೆ ಅವಧಿಗೆ ಹೋಲಿಸಿದರೆ ಶೇಕಡಾ 8 ರಷ್ಟು ಹೆಚ್ಚಾಗಿದೆ.
ಕಾರ್ಪೊರೇಟ್ ತೆರಿಗೆಯದ್ದೇ ಮೇಲುಗೈ:
ಈ ಬಾರಿಯ ತೆರಿಗೆ ಸಂಗ್ರಹದಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಪಾಲು ಅತಿ ದೊಡ್ಡದಾಗಿದೆ. ಕಳೆದ ವರ್ಷ 7.39 ಲಕ್ಷ ಕೋಟಿ ರೂಪಾಯಿ ಇದ್ದ ನಿವ್ವಳ ಕಾರ್ಪೊರೇಟ್ ತೆರಿಗೆಯು ಈ ಬಾರಿ 8.17 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಅಂದರೆ, ದೇಶದ ಒಟ್ಟು ನೇರ ತೆರಿಗೆಯಲ್ಲಿ ಸುಮಾರು ಅರ್ಧದಷ್ಟು ಪಾಲು ಕಾರ್ಪೊರೇಟ್ ವಲಯದಿಂದಲೇ ಹರಿದುಬಂದಿದೆ.
ರೀಫಂಡ್ ಪ್ರಮಾಣದಲ್ಲಿ ಇಳಿಕೆ:
ತೆರಿಗೆ ರೀಫಂಡ್ ಪ್ರಮಾಣ ಇಳಿಮುಖವಾಗಿರುವುದು ನಿವ್ವಳ ತೆರಿಗೆ ಸಂಗ್ರಹ ಹೆಚ್ಚಾಗಲು ಮತ್ತೊಂದು ಪ್ರಮುಖ ಕಾರಣವಾಗಿದೆ. ಈ ವರ್ಷ ಸರ್ಕಾರವು ಒಟ್ಟು 2.97 ಲಕ್ಷ ಕೋಟಿ ರೂಪಾಯಿಗಳನ್ನು ಮಾತ್ರ ರೀಫಂಡ್ ಆಗಿ ನೀಡಿದೆ. ಇದು ಕಳೆದ ವರ್ಷಕ್ಕಿಂತ ಶೇಕಡಾ 13.52ರಷ್ಟು ಕಡಿಮೆಯಾಗಿದೆ. ರೀಫಂಡ್ ಮೊತ್ತವನ್ನು ಹೊರತುಪಡಿಸಿ ಲೆಕ್ಕ ಹಾಕಿದರೆ, ಒಟ್ಟು ನೇರ ತೆರಿಗೆಯ ಬೆಳವಣಿಗೆ ದರ ಶೇ. 4.16 ರಷ್ಟಿದೆ.
ಸಂಗ್ರಹವಾದ ತೆರಿಗೆಯ ಹಂಚಿಕೆ ವಿವರ (ಏಪ್ರಿಲ್ 1 – ಡಿಸೆಂಬರ್ 17, 2025): ಸರ್ಕಾರದ ಬೊಕ್ಕಸಕ್ಕೆ ಸೇರಿದ ಹಣದ ವಿವರಗಳು ಹೀಗಿವೆ:
-
ಒಟ್ಟು ನೇರ ತೆರಿಗೆ ಸಂಗ್ರಹ: 20,01,794 ಕೋಟಿ ರೂ.
-
ರೀಫಂಡ್ ಮೊತ್ತ: 2,97,069 ಕೋಟಿ ರೂ.
-
ನಿವ್ವಳ ನೇರ ತೆರಿಗೆ: 17,04,725 ಕೋಟಿ ರೂ.
ಯಾವ ವಿಭಾಗದಿಂದ ಎಷ್ಟು ಆದಾಯ?
-
ಕಾರ್ಪೊರೇಟ್ ತೆರಿಗೆ: 8,17,310 ಲಕ್ಷ ಕೋಟಿ ರೂ.
-
ನಾನ್-ಕಾರ್ಪೊರೇಟ್ (ವೈಯಕ್ತಿಕ ಆದಾಯ ತೆರಿಗೆ ಇತ್ಯಾದಿ): 8,46,905 ಲಕ್ಷ ಕೋಟಿ ರೂ.
-
ಸೆಕ್ಯೂರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT): 40,195 ಕೋಟಿ ರೂ.
-
ಅಡ್ವಾನ್ಸ್ ಟ್ಯಾಕ್ಸ್: 7,88,388 8 ಲಕ್ಷ ಕೋಟಿ ರೂ. (ಇದರಲ್ಲಿ ಕಾರ್ಪೊರೇಟ್ ಸಂಸ್ಥೆಗಳ ಪಾಲು 6 ಲಕ್ಷ ಕೋಟಿಗೂ ಅಧಿಕ).
ಮುಂದಿನ ಗುರಿ: ಕಳೆದ ಪೂರ್ಣ ಹಣಕಾಸು ವರ್ಷದಲ್ಲಿ (2024-25) ಒಟ್ಟು 22.26 ಲಕ್ಷ ಕೋಟಿ ರೂಪಾಯಿ ನಿವ್ವಳ ತೆರಿಗೆ ಸಂಗ್ರಹವಾಗಿತ್ತು. ಆದರೆ ಪ್ರಸಕ್ತ ವರ್ಷ ಡಿಸೆಂಬರ್ ಮಧ್ಯಭಾಗಕ್ಕೇ 17 ಲಕ್ಷ ಕೋಟಿ ತಲುಪಿರುವುದು ಗಮನಾರ್ಹ. ಹಣಕಾಸು ವರ್ಷ ಮುಗಿಯಲು ಇನ್ನೂ ಮೂರು ತಿಂಗಳು ಬಾಕಿ ಇದ್ದು, ಈ ಬಾರಿ ತೆರಿಗೆ ಸಂಗ್ರಹವು ಸಾರ್ವಕಾಲಿಕ ದಾಖಲೆ ಬರೆಯುವ ನಿರೀಕ್ಷೆಯಿದೆ. ನೇರ ತೆರಿಗೆಯ ಜೊತೆಗೆ ಜಿಎಸ್‌ಟಿ ಅಂತಹ ಪರೋಕ್ಷ ತೆರಿಗೆಗಳ ಸಂಗ್ರಹವೂ ಏರಿಕೆಯಾಗುತ್ತಿರುವುದು ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ದೊಡ್ಡ ಬಲ ನೀಡಲಿದೆ.





