ನವದೆಹಲಿ ಆ.27: ನೇಪಾಳದಲ್ಲಿ ಸಂಭವಿಸಿದ ರಣ ಭೀಕರ ಪ್ರವಾಹ ಮತ್ತು ಭಾರೀ ಭೂಕುಸಿತದಿಂದಾಗಿ ಭಾರತೀಯರ ಆತಂಕ ಹೆಚ್ಚಾಗಿದೆ. ಪ್ರವಾಹ ದುರಂತದಲ್ಲಿ 288 ಭಾರತೀಯ ಪ್ರಜೆಗಳು ಇನ್ನೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಇಂದು ಗುರುವಾರ ಮಾಹಿತಿ ನೀಡಿದೆ. ದುರಂತದಲ್ಲಿ ಸುಮಾರು 270 ಮಂದಿ ಮೃತಪಟ್ಟಿದ್ದು, ಸಾವಿರಾರು ಜನ ನಾಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ನಾಪತ್ತೆಯಾಗಿರುವ ಭಾರತೀಯರ ಪತ್ತೆ ಹಾಗೂ ರಕ್ಷಣಾ ಕಾರ್ಯಾಚರಣೆಗಾಗಿ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೇಪಾಳದ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ ದುರಂತಕ್ಕೆ ಆಳವಾದ ಸಂತಾಪ ವ್ಯಕ್ತಪಡಿಸಿದ್ದಾರೆ. ನೇಪಾಳದ ಜನತೆಯೊಂದಿಗೆ ಭಾರತ ದೃಢವಾಗಿ ನಿಂತಿದ್ದು, ಅಗತ್ಯವಿರುವ ಎಲ್ಲ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
ನಾಪತ್ತೆಯಾಗಿರುವ 288 ಭಾರತೀಯರನ್ನು ಐದು ಪ್ರಮುಖ ಗುಂಪುಗಳಾಗಿ ಗುರುತಿಸಲಾಗಿದೆ. ತ್ರಿಶೂಲಿ-1 ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 73 ಮಂದಿ, ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ತಮಿಳುನಾಡಿನ 37 ಮಂದಿ ಹಾಗೂ ಮತ್ತೊಂದು ಪ್ರವಾಸ ಸಂಸ್ಥೆಯ ಮೂಲಕ ತೆರಳಿದ್ದ 49 ಮಂದಿ ಸೇರಿದ್ದಾರೆ. ಪಶ್ಚಿಮ ಬಂಗಾಳದ 32 ಮಂದಿ, ವಿವಿಧ ರಾಜ್ಯಗಳ 61 ಮಂದಿ ಮತ್ತು ಕೇರಳದ 33 ಮಂದಿ ಕೂಡ ಸಂಪರ್ಕಕ್ಕೆ ಸಿಗದವರ ಪಟ್ಟಿಯಲ್ಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ನಡುವೆ ಪ್ರವಾಹ ಪೀಡಿತ ಪ್ರದೇಶಗಳಿಂದ ತಮಿಳುನಾಡಿನ 21 ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ. ರಕ್ಷಿಸಲ್ಪಟ್ಟವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವೂ ನಡೆದಿದೆ.
ಇದೇ ವೇಳೆ, ಚೀನಾದ ಟಿಬೆಟ್ ಪ್ರದೇಶದಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿ ಸಿಲುಕಿರುವ ಸುಮಾರು 200 ಭಾರತೀಯರು ನೆರವು ಕೋರಿದ್ದಾರೆ. ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಭಾರತೀಯ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ. ಎಂದು ತಿಳಿಸಿದ್ದಾರೆ.
ಸುಮಾರು 95 ಮಂದಿ ಗಾರ್ಚನ್ ಪ್ರದೇಶದಲ್ಲಿದ್ದು, ನೇಪಾಳದತ್ತ ತೆರಳಲು ಬಿಲ್ಸಾ ಕಡೆಗೆ ಸಾಗುತ್ತಿದ್ದಾರೆ. ನಾಲ್ವರು ಗೀಲಾಂಗ್ ನಗರದಲ್ಲಿದ್ದು, 13 ಮಂದಿ ಜುತುಲ್ಪೋದಲ್ಲಿ ಸಿಲುಕಿದ್ದಾರೆ. ಪರಿಸ್ಥಿತಿ ನಿರಂತರವಾಗಿ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಮತ್ತು ಸ್ಥಳಾಂತರ ಕಾರ್ಯಾಚರಣೆಯನ್ನು ಅಧಿಕಾರಿಗಳು ತೀವ್ರಗೊಳಿಸಿದ್ದಾರೆ ತಿಳಿದು ಬಂದಿದೆ.





