ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ NEET-UG 2024 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದು, ‘ಕಿಂಗ್‌ಪಿನ್’ ಎಂದು ಗುರುತಿಸಲಾಗಿದ್ದ ಸಂಜೀವ್ ಕುಮಾರ್ ಅಲಿಯಾಸ್ ಸಂಜೀವ್ ಮುಖಿಯಾ ವಿರುದ್ಧ ಪ್ರಶ್ನೆಪತ್ರಿಕೆ ಕಳ್ಳತನ ಅಥವಾ ವಿತರಣೆಯಲ್ಲಿ ಭಾಗಿಯಾಗಿದ್ದಾನೆ ಎಂಬುದಕ್ಕೆ ಯಾವುದೇ ದೃಢವಾದ ಸಾಕ್ಷ್ಯ ಸಿಕ್ಕಿಲ್ಲ ಎಂದು ಕೇಂದ್ರೀಯ ತನಿಖಾ ದಳ (CBI) ಸ್ಪಷ್ಟಪಡಿಸಿದೆ.
2024ರಲ್ಲಿ ನಡೆದ NEET-UG ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ದೇಶದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿತ್ತು.. ಈ ಪ್ರಕರಣದ ತನಿಖೆ ಆರಂಭಿಸಿದ ಬಿಹಾರ ಪೊಲೀಸರು, ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ಪ್ರಮುಖ ವ್ಯಕ್ತಿ ಎಂದು ಶಂಕಿಸಿ ಸಂಜೀವ್ ಮುಖಿಯಾ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಿದ್ದರು.
ಸಂಜೀವ್ ಮುಖಿಯಾ ಈ ಹಿಂದೆ ಹಲವು ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮ ಪ್ರಕರಣಗಳಲ್ಲಿ ಹೆಸರು ಕೇಳಿಬಂದಿದ್ದ ಕಾರಣ, ಆರಂಭಿಕ ತನಿಖೆಯಲ್ಲೇ ಆತನ ಮೇಲೆ ಅನುಮಾನ ವ್ಯಕ್ತವಾಗಿತ್ತು. ಈ ಹಿನ್ನೆಲೆ ಆತ ಪ್ರಕರಣದ ಪ್ರಮುಖ ಆರೋಪಿಯಾಗಿ ಪರಿಗಣಿಸಲಾಗಿತ್ತು.
ನಂತರ ಪ್ರಕರಣವನ್ನು ಕೇಂದ್ರ ಸರ್ಕಾರ ಸಿಬಿಐಗೆ ವರ್ಗಾಯಿಸಿತು. ಸಿಬಿಐ ಅಧಿಕಾರಿಗಳು ಹಲವು ರಾಜ್ಯಗಳಲ್ಲಿ ವ್ಯಾಪಕ ತನಿಖೆ ನಡೆಸಿ, ಪ್ರಶ್ನೆಪತ್ರಿಕೆ ಕಳ್ಳತನ, ಸಾಗಣೆ ಮತ್ತು ವಿತರಣೆಯಲ್ಲಿ ಭಾಗಿಯಾಗಿದ್ದವರನ್ನು ಗುರುತಿಸುವ ಕಾರ್ಯ ಕೈಗೊಂಡರು. ಡಿಜಿಟಲ್ ದಾಖಲೆಗಳು, ಹಣಕಾಸು ವ್ಯವಹಾರಗಳು, ಮೊಬೈಲ್ ಕರೆಗಳ ವಿವರಗಳು ಹಾಗೂ ಸಾಕ್ಷಿದಾರರ ಹೇಳಿಕೆಗಳನ್ನು ಪರಿಶೀಲಿಸಲಾಯಿತು.
ಸಿಬಿಐ ನಡೆಸಿದ ಸಮಗ್ರ ತನಿಖೆಯಲ್ಲಿ, ಪ್ರಶ್ನೆಪತ್ರಿಕೆ ಕಳ್ಳತನ ಮತ್ತು ವಿತರಣೆಯಲ್ಲಿ ಭಾಗಿಯಾಗಿದ್ದ ಹಲವು ಆರೋಪಿಗಳ ವಿರುದ್ಧ ಸಾಕ್ಷ್ಯಗಳು ದೊರೆತಿವೆ. ಆದರೆ ಸಂಜೀವ್ ಮುಖಿಯಾ ಈ ಸಂಚಿನಲ್ಲಿ ನೇರವಾಗಿ ಭಾಗಿಯಾಗಿದ್ದಾನೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಪುರಾವೆ ತನಿಖೆಯಲ್ಲಿ ಲಭ್ಯವಾಗಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಈ ಕುರಿತು ಸಿಬಿಐ ಗುರುವಾರ ನೀಡಿದ ಮಾಹಿತಿಯಲ್ಲಿ, ಪ್ರಕರಣದ ಸಂಪೂರ್ಣ ಪಿತೂರಿಯನ್ನು ತನಿಖೆ ಮೂಲಕ ಪತ್ತೆಹಚ್ಚಲಾಗಿದ್ದು, ಅದರಲ್ಲಿ ಭಾಗಿಯಾಗಿದ್ದವರನ್ನು ಗುರುತಿಸಲಾಗಿದೆ ಎಂದು ಹೇಳಿದೆ. ಆದರೆ ಸಂಜೀವ್ ಮುಖಿಯಾ ವಿರುದ್ಧದ ಆರೋಪಗಳಿಗೆ ಅಗತ್ಯವಾದ ಸಾಕ್ಷ್ಯಾಧಾರಗಳು ದೊರೆಯದ ಕಾರಣ, ಆತನಿಗೆ ಕ್ಲೀನ್‌ಚಿಟ್ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಮೂಲಕ ಸೋರಿಕೆ ಜಾಲದಲ್ಲಿ ಭಾಗಿಯಾಗಿದ್ದ ಇತರ ಆರೋಪಿಗಳನ್ನು ಸಿಬಿಐ ಈಗಾಗಲೇ ಗುರುತಿಸಿದ್ದು, ಅವರ ವಿರುದ್ಧ ಕಾನೂನು ಕ್ರಮ ಮುಂದುವರಿದಿದೆ.





