ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ವಿಮಲಗಿರಿ ನಿವಾಸಿ ಸಾಂಜೋ ಸುನೀಲ್ (31) ಅವರು ನಿಗೂಢ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಾರ್ಲ್ಸ್‌ಟೌನ್‌ನಲ್ಲಿರುವ ತಮ್ಮ ನಿವಾಸದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸುನೀಲ್ ಅವರ ಮೃತದೇಹ ಪತ್ತೆಯಾಗಿದ್ದು, ಐರ್ಲೆಂಡ್ ಪೊಲೀಸರು ಈ ಸಂಶಯಾಸ್ಪದ ಸಾವಿನ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಸುನೀಲ್ ಅವರು ಕೆಲವು ತಿಂಗಳ ಹಿಂದೆಯಷ್ಟೇ ಐರ್ಲೆಂಡ್‌ಗೆ ತೆರಳಿ ಪತ್ನಿಯೊಂದಿಗೆ ವಾಸವಾಗಿದ್ದರು. ಪತ್ನಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಮೊದಲು ಇಸ್ರೇಲ್‌ನಲ್ಲಿ ಕೆಲಸ ಮಾಡಿದ್ದ ಸುನೀಲ್, ವರ್ಷದ ಹಿಂದೆ ಕಡಬ ಮೂಲದ ಯುವತಿಯನ್ನು ವಿವಾಹವಾಗಿದ್ದರು. ಆತ್ಮಹತ್ಯೆಯೇ ಆಗಿದೆಯಾ ಅಥವಾ ಬೇರೆ ಯಾವುದಾದರೂ ಕಾರಣವಿದೆಯಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ಮೃತದೇಹದ ಪೋಸ್ಟ್‌ಮಾರ್ಟಂ ವರದಿ ಮತ್ತು ಮನೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ.
ಈ ಘಟನೆಯಿಂದ ಕಡಬ ತಾಲೂಕು ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಆಘಾತ ಮತ್ತು ಆತಂಕ ಮೂಡಿದೆ. ಸುನೀಲ್ ಅವರ ಕುಟುಂಬ ಮತ್ತು ಸ್ನೇಹಿತರು ಐರ್ಲೆಂಡ್ ಪೊಲೀಸ್‌ನಿಂದ ಸತ್ಯಾಂಶ ಬಹಿರಂಗಪಡಿಸುವಂತೆ ಒತ್ತಾಯಿಸುತ್ತಿದ್ದಾರೆ.
ಕೆನಡಾದಲ್ಲಿ ಮತ್ತೊಬ್ಬ ಕನ್ನಡಿಗನ ದುರ್ಮರಣ
ಇತ್ತೀಚಿಗೆ ಕೆನಡಾದಲ್ಲಿ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್ ಅವರು ಗುಂಡಿನ ದಾಳಿಗೆ ಬಲಿಯಾಗಿದ್ದರು. ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಚಂದನ್ ಕನ್ನಡ ಪರ ಸಂಘಟನೆಗಳನ್ನು ಕಟ್ಟಿಕೊಂಡು ಕನ್ನಡಿಗರ ಧ್ವನಿಯಾಗಿದ್ದರು. ಟೊರಾಂಟೋ ಪೊಲೀಸರು ಈ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದರೂ, ಕೊಲೆಗಾರರು ಮತ್ತು ಕಾರಣ ಇನ್ನೂ ಬಹಿರಂಗವಾಗಿಲ್ಲ. ಚಂದನ್ ಅವರ ಅಂತ್ಯಕ್ರಿಯೆ ಹುಟ್ಟೂರಲ್ಲಿ ನಡೆದಿದೆ.
ಈ ಎರಡೂ ಘಟನೆಗಳು ವಿದೇಶದಲ್ಲಿರುವ ಕನ್ನಡಿಗರ ಭದ್ರತೆಯ ಬಗ್ಗೆ ಚಿಂತೆಯನ್ನು ಹುಟ್ಟುಹಾಕಿವೆ. ಕುಟುಂಬಗಳು ಮತ್ತು ಸ್ಥಳೀಯ ಸಂಘಟನೆಗಳು ತನಿಖೆಯನ್ನು ಗಮನಿಸುತ್ತಿವೆ.
