ನವದೆಹಲಿ, ಫೆಬ್ರವರಿ 19: ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳು ಘೋಷಿಸುವ ‘ಉಚಿತ ಗ್ಯಾರಂಟಿ’ ಸಂಸ್ಕೃತಿ ದೇಶದ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗಬಹುದು ಎಂದು ಸುಪ್ರೀಂಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ರಾಜ್ಯಗಳು ಈಗಾಗಲೇ ಕಂದಾಯ ಕೊರತೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ವಿವೇಚನೆಯಿಲ್ಲದೆ ಉಚಿತ ಸೌಲಭ್ಯಗಳನ್ನು ಘೋಷಿಸುವುದು ಆರ್ಥಿಕ ಶಿಸ್ತು ಕುಂದಿಸಲು ಕಾರಣವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಪೀಠವು, “ಪಾವತಿಸಲು ಅಶಕ್ತರಾದವರಿಗೆ ನೆರವು ನೀಡುವುದು ಕಲ್ಯಾಣದ ಅಂಶ. ಆದರೆ ಶ್ರೀಮಂತ-ಬಡವ ಎಂಬ ಭೇದವಿಲ್ಲದೆ ಎಲ್ಲರಿಗೂ ಉಚಿತ ಕೊಡುಗೆ ನೀಡುವುದು ಸರಿಯಾದ ನೀತಿ ಅಲ್ಲ” ಎಂದು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಹಾಗೂ ವಿಪುಲ್ ಎಂ. ಪಾಂಚೋಲಿ ಕೂಡ ಈ ವಿಚಾರದಲ್ಲಿ ರಾಜ್ಯಗಳ ನಿಲುವು ಪ್ರಶ್ನಿಸಿದರು.
“ಎಂಥಾ ಸಂಸ್ಕೃತಿ ಬೆಳೆಸುತ್ತಿದ್ದೇವೆ?”
ನ್ಯಾಯಾಲಯ ತೀವ್ರವಾಗಿ ಪ್ರಶ್ನಿಸಿದ್ದು, “ಬೆಳಿಗ್ಗೆಯಿಂದ ಸಂಜೆಯವರೆಗೆ ಉಚಿತ ಆಹಾರ, ಉಚಿತ ವಿದ್ಯುತ್, ಉಚಿತ ಸೈಕಲ್, ಉಚಿತ ಗ್ಯಾಸ್ ನೀಡುತ್ತಾ ನೇರವಾಗಿ ಖಾತೆಗೆ ಹಣ ವರ್ಗಾವಣೆ ಮಾಡಿದರೆ ಮುಂದೆ ಕೆಲಸ ಮಾಡುವ ಮನೋಭಾವ ಏನಾಗುತ್ತದೆ?” ಎಂದು ಪ್ರಶ್ನಿಸಿದರು. ಕಲ್ಯಾಣ ಯೋಜನೆಗಳ ಉದ್ದೇಶ ಬಡವರ ಉತ್ತೇಜನವಾಗಿರಬೇಕು, ಮತಗಳ ಆಕರ್ಷಣೆಯ ಸಾಧನವಾಗಬಾರದು ಎಂದು ಪೀಠ ಸೂಚಿಸಿದೆ.
ತಮಿಳುನಾಡು ವಿದ್ಯುತ್ ಯೋಜನೆಗೆ ಆಕ್ಷೇಪ
ಎಲ್ಲರಿಗೂ ಉಚಿತ ವಿದ್ಯುತ್ ನೀಡುವ ಪ್ರಸ್ತಾವನೆ ಕುರಿತು ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ತಮಿಳುನಾಡು ವಿದ್ಯುತ್ ಮಂಡಳಿ ಎಲ್ಲ ಗ್ರಾಹಕರಿಗೂ ಆರ್ಥಿಕ ಸ್ಥಿತಿ ಪರಿಗಣಿಸದೆ ಉಚಿತ ವಿದ್ಯುತ್ ನೀಡುವುದಾಗಿ ಹೇಳಿರುವುದು ನ್ಯಾಯಾಲಯದ ಗಮನಕ್ಕೆ ಬಂದಿತ್ತು. “ಪಾವತಿಸುವ ಸಾಮರ್ಥ್ಯ ಇರುವವರಿಗೂ ಉಚಿತ ಸೌಲಭ್ಯ ನೀಡುವುದು ತುಷ್ಟೀಕರಣದ ನೀತಿಯಲ್ಲವೇ?” ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ಉದ್ಯೋಗ ಸೃಷ್ಟಿಯೇ ಮುಖ್ಯ
ರಾಜ್ಯಗಳು ಉಚಿತ ಕೊಡುಗೆಗಳಿಗಿಂತ ಉದ್ಯೋಗಾವಕಾಶಗಳ ಸೃಷ್ಟಿಗೆ ಆದ್ಯತೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಒತ್ತಿಹೇಳಿದೆ. ನಿರುದ್ಯೋಗ ನಿವಾರಣೆಗೆ ಬಜೆಟ್‌ನಲ್ಲಿ ಎಷ್ಟು ವೆಚ್ಚ ಮಾಡಲಾಗುತ್ತಿದೆ ಎಂಬ ಸಮಗ್ರ ವಿವರವನ್ನು ಸರ್ಕಾರಗಳು ನೀಡಬೇಕು ಎಂದು ಪೀಠ ಸೂಚಿಸಿದೆ. ಆರ್ಥಿಕ ಅಭಿವೃದ್ಧಿಗೆ ಶಾಶ್ವತ ಪರಿಹಾರ ಉದ್ಯೋಗ ಸೃಷ್ಟಿಯಲ್ಲಿದೆ, ತಾತ್ಕಾಲಿಕ ಉಚಿತ ಸೌಲಭ್ಯಗಳಲ್ಲಿ ಅಲ್ಲ ಎಂದು ನ್ಯಾಯಾಲಯ ಸ್ಪಷ್ಟ ಸಂದೇಶ ನೀಡಿದೆ.
ರಾಜ್ಯಗಳ ಕಂದಾಯ ಕೊರತೆ ಚಿಂತಾಜನಕ
ಹೆಚ್ಚಿನ ರಾಜ್ಯಗಳು ಈಗಾಗಲೇ ನಷ್ಟದಲ್ಲಿವೆ. ಆದಾಯಕ್ಕಿಂತ ವೆಚ್ಚ ಹೆಚ್ಚುತ್ತಿರುವ ಪರಿಸ್ಥಿತಿಯಲ್ಲಿ ಉಚಿತ ಯೋಜನೆಗಳ ಭಾರ ಮತ್ತಷ್ಟು ಆರ್ಥಿಕ ಒತ್ತಡ ತರುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ. ಅಭಿವೃದ್ಧಿ ಯೋಜನೆಗಳಿಗೆ ಹಣ ಮೀಸಲಿಡುವ ಬದಲು ಉಚಿತ ಘೋಷಣೆಗಳಿಗೆ ಆದ್ಯತೆ ನೀಡುವುದು ದೂರದೃಷ್ಟಿಯ ಕೊರತೆಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಕರ್ನಾಟಕದಲ್ಲೂ ಚರ್ಚೆ
ಉಚಿತ ಯೋಜನೆಗಳ ಬಗ್ಗೆ ಕರ್ನಾಟಕದಲ್ಲೂ ಚರ್ಚೆ ಗರಿಗೆದರಿದೆ. ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮೋಹನದಾಸ್ ಪೈ, “ಕರ್ನಾಟಕದ ಶೇ.60 ರಷ್ಟು ಜನರು ಬಡವರಲ್ಲ. ಅಗತ್ಯವಿರುವವರಿಗೆ ಮಾತ್ರ ಸೌಲಭ್ಯ ನೀಡಬೇಕು” ಎಂದು ಹೇಳಿದ್ದಾರೆ. ನಗರ ಪ್ರದೇಶದ ಜನರಿಗೆ ಎಲ್ಲರಿಗೂ ಉಚಿತ ವಿದ್ಯುತ್ ನೀಡುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ನಗರ ಯೋಜನೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು. ಕೇಂದ್ರದಿಂದ ಸಮರ್ಪಕ ಹಣಕಾಸು ಸಿಗುತ್ತಿಲ್ಲ ಎಂಬುದನ್ನೂ ಅವರು ಉಲ್ಲೇಖಿಸಿದರು.
ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಸೇರಿದಂತೆ ಎಲ್ಲಾ ಸಂಬಂಧಿತ ಪಕ್ಷಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ಉಚಿತ ವಿದ್ಯುತ್ ಹಾಗೂ ಇತರ ಗ್ಯಾರಂಟಿ ಯೋಜನೆಗಳಿಗೆ ಯಾವ ರೀತಿಯ ನಿಯಮಗಳು ಅನ್ವಯಿಸಬೇಕು ಎಂಬುದನ್ನು ಮುಂದಿನ ವಿಚಾರಣೆಯಲ್ಲಿ ನಿರ್ಧರಿಸುವ ಸಾಧ್ಯತೆ ಇದೆ.
ಕಲ್ಯಾಣ ಯೋಜನೆಗಳು ಅಗತ್ಯವಿರುವವರಿಗೆ ತಲುಪಬೇಕು, ಆದರೆ ಆರ್ಥಿಕ ಶಿಸ್ತು ಮತ್ತು ದೀರ್ಘಾವಧಿಯ ಅಭಿವೃದ್ಧಿ ದೃಷ್ಟಿಯನ್ನು ಮರೆತರೆ ದೇಶದ ಆರ್ಥಿಕತೆಗೆ ಗಂಭೀರ ಪರಿಣಾಮ ಉಂಟಾಗಬಹುದು ಎಂಬುದು ಸುಪ್ರೀಂಕೋರ್ಟ್ ನೀಡಿದ ಸ್ಪಷ್ಟ ಸಂದೇಶವಾಗಿದೆ.
