ಪುಣೆ (ನ.13): ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ಅಪಘಾತ ಸಂಭವಿಸಿ, ಐವರು ಸಾವನ್ನಪ್ಪಿದ್ದಾರೆ ಮತ್ತು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪುಣೆಯ ಹೊರವಲಯದಲ್ಲಿರುವ ಸೆಲ್ಫಿ ಪಾಯಿಂಟ್ ಬ್ರಿಡ್ಜ್ ಮತ್ತು ನವಲೆ ಸೇತುವೆ ಬಳಿ ಈ ದುರಂತ ನಡೆದಿದೆ. ಅತೀ ವೇಗದಲ್ಲಿ ಬಂದ ಕಂಟೈನರ್ ಟ್ರಕ್ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದ 15ಕ್ಕೂ ಹೆಚ್ಚು ವಾಹನಗಳ ಮೇಲೆ ಹರಿದಿದೆ. ಈ ಸರಣಿ ಡಿಕ್ಕಿಯಿಂದ ಕಾರುಗಳು, ಟ್ರಕ್‌ಗಳು ಅಪ್ಪಚ್ಚಿಯಾಗಿ, ಬೆಂಕಿ ಹೊತ್ತಿಕೊಂಡು ಸಂಪೂರ್ಣ ಭಸ್ಮವಾಗಿವೆ. ಘಟನೆಯ ತೀವ್ರತೆಯಿಂದ ಹೆದ್ದಾರಿ ಕಿಲೋಮೀಟರ್‌ಗಳವರೆಗೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪೊಲೀಸರು ಬದಲಿ ಮಾರ್ಗಗಳನ್ನು ಸೂಚಿಸಿ ವಾಹನ ಸಂಚಾರವನ್ನು ನಿಯಂತ್ರಿಸುತ್ತಿದ್ದಾರೆ.
ಘಟನೆಯ ವಿವರ
ವೇಗವಾಗಿ ಬಂದ ಕಂಟೈನರ್ ಟ್ರಕ್ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಸಾಲು ಸಾಲು ನಿಂತಿದ್ದ ವಾಹನಗಳ ಮೇಲೆ ಟ್ರಕ್ ಹರಿದು ಹೋಗಿದೆ. ಟ್ರಕ್ ಹರಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಭಸ್ಮವಾಗಿದೆ. ಟ್ರಕ್ ಸಹ ಬೆಂಕಿಗೆ ಆಹುತಿಯಾಗಿದೆ. ಪ್ರಾಥಮಿಕ ವರದಿಯಂತೆ, ಮೂರು ವಾಹನಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ.
ಅಪಘಾತದಲ್ಲಿ ಮೃತಪಟ್ಟ ಐವರಲ್ಲಿ ಹೆಚ್ಚಿನವರು ಕಾರಿನಲ್ಲಿದ್ದವರು ಎಂದು ತಿಳಿದುಬಂದಿದೆ. ಗಾಯಾಳುಗಳಲ್ಲಿ ಕೆಲವರ ಪರಿಸ್ಥಿತಿ ಗಂಭೀರವಾಗಿದ್ದು, ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಪುಣೆ ಸಿಟಿ ಪೊಲೀಸ್ ಡಿಸಿಪಿ ಸಂಭಾಜಿ ಕದಮ್ ಸ್ವತಃ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. “ಐವರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ರಕ್ಷಣೆ ಮತ್ತು ಚಿಕಿತ್ಸೆಗೆ ಆದ್ಯತೆ ನೀಡಿದ್ದೇವೆ. ಟ್ರಾಫಿಕ್ ಜಾಮ್ ಸರಿದೂಗಿಸಲು ಬದಲಿ ಮಾರ್ಗಗಳನ್ನು ತೆರೆಯಲಾಗಿದೆ” ಎಂದು ಡಿಸಿಪಿ ಕದಮ್ ಹೇಳಿದ್ದಾರೆ.





