ಉತ್ತರ ಪ್ರದೇಶ: ತಾಯಿಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ರಿಸೌರಾ ಗ್ರಾಮದಲ್ಲಿ ಆಗಸ್ಟ್ 9ರಂದು ನಡೆದಿದೆ.
ಮೃತರನ್ನು ರೀನಾ (ತಾಯಿ), ಆಕೆಯ ಮಕ್ಕಳಾದ ಹಿಮಾಂಶು (9), ಅನ್ನಿ (5) ಮತ್ತು ಪ್ರಿನ್ಸ್ (3) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದಿಂದ ಮನನೊಂದ ರೀನಾ, ತನ್ನ ಜೀವನವನ್ನು ಮಕ್ಕಳೊಂದಿಗೆ ಕೊನೆಗೊಳಿಸಿದ್ದಾಳೆ.
ಘಟನೆಯ ಹಿನ್ನೆಲೆ
ಶುಕ್ರವಾರ ತಡರಾತ್ರಿ ರೀನಾ ತನ್ನ ಪತಿ ಅಖಿಲೇಶ್ ಜೊತೆ ತೀವ್ರ ಜಗಳವಾಡಿದ್ದಾಳೆ. ಕೌಟುಂಬಿಕ ಸಮಸ್ಯೆಗೆ ಸಂಬಂಧಿಸಿದ ಈ ಜಗಳ ತಾರಕಕ್ಕೇರಿತು ಎಂದು ಸ್ಥಳೀಯರು ತಿಳಿಸಿದ್ದಾರೆ. ಜಗಳದ ಬಳಿಕ, ರೀನಾ ತನ್ನ ಪತಿಯ ಅರಿವಿಗೆ ಬಾರದಂತೆ ರಾತ್ರಿ ವೇಳೆ ಮೂವರು ಮಕ್ಕಳೊಂದಿಗೆ ಮನೆಯಿಂದ ಹೊರಟಿದ್ದಾಳೆ. ಆಕೆ, ಯಾರೂ ಬದುಕುಳಿಯದಂತೆ, ತನ್ನ ಮಕ್ಕಳನ್ನು ಮತ್ತು ತನ್ನನ್ನು ಬಟ್ಟೆಯಿಂದ ಒಟ್ಟಿಗೆ ಕಟ್ಟಿಕೊಂಡು ಕಾಲುವೆಗೆ ಜಿಗಿದಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಕಾಲುವೆಯ ದಡದ ಬಳಿ ರೀನಾಳ ಬಟ್ಟೆ, ಬಳೆ, ಚಪ್ಪಲಿ ಮತ್ತು ಇತರ ವೈಯಕ್ತಿಕ ವಸ್ತುಗಳು ಕಂಡುಬಂದಿದ್ದು, ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿ, ಕಾಲುವೆಯ ನೀರಿನ ಮಟ್ಟವನ್ನು ಕಡಿಮೆ ಮಾಡಿ, ಈಜುಗಾರರನ್ನು ಮೃತದೇಹಗಳ ಶೋಧಕ್ಕಾಗಿ ನಿಯೋಜಿಸಿದರು. ಸುಮಾರು 5-6 ಗಂಟೆಗಳ ಕಾಲ ನಡೆದ ಶೋಧ ಕಾರ್ಯಾಚರಣೆಯ ಬಳಿಕ, ರೀನಾ ಮತ್ತು ಆಕೆಯ ಮೂವರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಈ ಶವಗಳನ್ನು ಒಟ್ಟಿಗೆ ಬಟ್ಟೆಯಿಂದ ಕಟ್ಟಲಾಗಿತ್ತು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವರಾಜ್ ಮಾತನಾಡಿ, “ಕಾಲುವೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ ಮೃತದೇಹಗಳು ಕಂಡುಬಂದಿವೆ. ಇವುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆಯ ಸಂಪೂರ್ಣ ತನಿಖೆಯನ್ನು ಪ್ರಾರಂಭಿಸಲಾಗಿದೆ” ಎಂದು ತಿಳಿಸಿದ್ದಾರೆ.