ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಆದಂಪುರ್ ವಾಯುನೆಲೆಗೆ ಭೇಟಿ ನೀಡಿದರು. ಭಾರತ-ಪಾಕಿಸ್ತಾನ ಕದನವಿರಾಮದ ಬಳಿಕ ಇಂದು (ಮೇ 13) ಬೆಳಗ್ಗೆ ಪಂಜಾಬ್‌ನ ಅದಂಪುರದ ವಾಯುಪಡೆಯ ನೆಲೆಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ವಾಯುಪಡೆಯ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದಾರೆ. ಹಾಗೇ, ಅಲ್ಲಿನ ಸೈನಿಕರ ಜೊತೆ ಕಾಲ ಕಳೆದು, ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ, ಪ್ರೇರಕ ಮಾತುಗಳನ್ನಾಡಿದರು.
ಭಾರತದ “ಆಪರೇಷನ್ ಸಿಂಧೂರ್” ನಂತರ,ಮೇ 9-10ರ ಮಧ್ಯರಾತ್ರಿ ಪಾಕಿಸ್ತಾನ ದಾಳಿ ಮಾಡಲು ಪ್ರಯತ್ನಿಸಿದ ವಾಯುಪಡೆಯ ಕೇಂದ್ರಗಳಲ್ಲಿ ಅದಮ್‌ಪುರವೂ ಒಂದು.ಸೈನಿಕರೊಂದಿಗೆ ಕಾಲ ಕಳೆದ ಅವರು, ಅವರ ಧೈರ್ಯ ಮತ್ತು ಸಮರ್ಪಣೆಯನ್ನು ಶ್ಲಾಘಿಸಿದರು.ಇನ್ನು ಪಂಜಾಬ್‌ನ ಆದಂಪುರ ಏರ್ಬೇಸ್ಗೆ ಭೇಟಿ ನೀಡಿ ಸೈನಿಕರೊಂದಿಗೆ ಪ್ರಧಾನಿ ಮೋದಿ ನಡೆಸಿದ್ದ ಸಂವಾದ.
ಪಾಕಿಸ್ತಾನವು ಆದಂಪುರ್ ವಾಯುನೆಲೆಯನ್ನು ಛಿದ್ರಗೊಳಿಸಿದ್ದೇವೆ ಎಂಬ ಸುಳ್ಳು ಸುದ್ದಿಯನ್ನು ಹರಡಿತ್ತು. ಆದರೆ, ಮೋದಿಯವರ ಈ ಭೇಟಿಯು ಈ ಸುಳ್ಳನ್ನು ತಿರಸ್ಕರಿಸಿ, ಭಾರತದ ವಾಯು ರಕ್ಷಣಾ ಸಾಮರ್ಥ್ಯವನ್ನು ಜಗತ್ತಿಗೆ ಸಾರಿತು.
ಕಳೆದ ವಾರ ಪಾಕಿಸ್ತಾನವು ಆದಂಪುರ್ ಸೇರಿದಂತೆ ಭಾರತದ ವಾಯುನೆಲೆಗಳ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೂಲಕ ದಾಳಿ ನಡೆಸಲು ಯತ್ನಿಸಿತು, ಆದರೆ ವಿಫಲವಾಯಿತು. ಆದಂಪುರ್ ವಾಯುನೆಲೆಯು ಈ ದಾಳಿಗಳನ್ನು ಹಿಮ್ಮೆಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಪಾಕಿಸ್ತಾನವು ತಾನು ಆದಂಪುರ್‌ನ್ನು ಧ್ವಂಸಗೊಳಿಸಿತು ಎಂದು ವಾದಿಸಿತ್ತು, ಆದರೆ ಮೋದಿಯವರ ಭೇಟಿಯು ಈ ಸುಳ್ಳನ್ನು ಬಯಲಿಗೆಳೆಯಿತು.
ಮೋದಿಯವರು ತಮ್ಮ ಭಾಷಣದಲ್ಲಿ ಭಾರತೀಯ ವಾಯುಪಡೆಯನ್ನು ಶ್ಲಾಘಿಸಿದರು. “ಪಾಕಿಸ್ತಾನದ ಡ್ರೋನ್‌ಗಳು, ಯುಎವಿಗಳು, ವಿಮಾನಗಳು ಮತ್ತು ಕ್ಷಿಪಣಿಗಳು ನಮ್ಮ ವಾಯು ರಕ್ಷಣಾ ವ್ಯವಸ್ಥೆಯ ಮುಂದೆ ವಿಫಲವಾದವು. ದೇಶದ ಎಲ್ಲಾ ವಾಯುನೆಲೆಗಳ ನಾಯಕತ್ವಕ್ಕೆ ಮತ್ತು ಪ್ರತಿಯೊಬ್ಬ ವಾಯುಪಡೆ ಯೋಧರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ,” ಎಂದು ಹೇಳಿದರು. ಆದಂಪುರ್‌ನ ಯೋಧರ ಧೈರ್ಯವನ್ನು ಕೊಂಡಾಡಿದ ಅವರು, “ನೀವು ಅದ್ಭುತ ಕೆಲಸ ಮಾಡಿದ್ದೀರಿ,” ಎಂದರು.
ಆಪರೇಷನ್ ಸಿಂದೂರ್‌ನ ಯಶಸ್ಸನ್ನು ಮೋದಿ ಒತ್ತಿ ಹೇಳಿದರು. ಈ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯು ಪಾಕಿಸ್ತಾನದೊಳಗಿನ ಭಯೋತ್ಪಾದಕ ನೆಲೆಗಳನ್ನು ವೇಗ ಮತ್ತು ನಿಖರತೆಯಿಂದ ಗುರಿಯಾಗಿಸಿತು. “ನೀವು ಶತ್ರುಗಳನ್ನು ದಿಗ್ಭ್ರಮೆಗೊಳಿಸಿದ್ದೀರಿ. ಆಪರೇಷನ್ ಸಿಂಧೂರ್‌ನೊಂದಿಗೆ ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದೀರಿ, ಜನರಲ್ಲಿ ಏಕತೆಯನ್ನು ತಂದಿದ್ದೀರಿ,” ಎಂದು ಮೋದಿ ಶ್ಲಾಘಿಸಿದರು.
“ನಮ್ಮ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಬಗ್ಗೆ ಯೋಚಿಸಿದರೂ ಪಾಕಿಸ್ತಾನಕ್ಕೆ ನಿದ್ರೆ ಬರುವುದಿಲ್ಲ,” ಎಂದು ಮೋದಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು. ಭಾರತದ ವಾಯು ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯವನ್ನು ಒತ್ತಿ ಹೇಳಿದ ಅವರು, ಪಾಕಿಸ್ತಾನದ ಯಾವುದೇ ದುಸ್ಸಾಹಸವನ್ನು ಭಾರತ ಯಶಸ್ವಿಯಾಗಿ ತಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.
ಮೋದಿಯವರು ಸೈನಿಕರನ್ನು “ವೀರರು” ಎಂದು ಸಂಬೋಧಿಸಿ, “ನೀವು ಇತಿಹಾಸವನ್ನು ಸೃಷ್ಟಿಸಿದ್ದೀರಿ. ದಶಕಗಳ ನಂತರವೂ ಆಪರೇಷನ್ ಸಿಂಧೂರ್‌ನ ಬಗ್ಗೆ ಚರ್ಚೆಯಾದಾಗ, ನೀವೆಲ್ಲರೂ ಅದರ ಮೊದಲ ಅಧ್ಯಾಯದಲ್ಲಿರುತ್ತೀರಿ,” ಎಂದರು. ಈ ಘಟನೆಯು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂದು ತಿಳಿಸಿದರು.