ಕೋಲ್ಕತ್ತಾ: ವಿಶ್ವ ಫುಟ್‌ಬಾಲ್‌ನ ಲೆಜೆಂಡ್ ಲಿಯೋನೆಲ್ ಮೆಸ್ಸಿ ಅವರ ಭಾರತ ಪ್ರವಾಸದ ವೇಳೆ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಸಂಭವಿಸಿದ ಭಾರೀ ಅವ್ಯವಸ್ಥೆ ಈಗ ಹೊಸ ತಿರುವು ಪಡೆದುಕೊಂಡಿದೆ. ಕಾರ್ಯಕ್ರಮವನ್ನು ಸಮರ್ಪಕವಾಗಿ ಆಯೋಜಿಸಲು ವಿಫಲವಾದ ಹಿನ್ನೆಲೆಯಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಕ್ಷಣವೇ ಅದನ್ನು ಅಂಗೀಕರಿಸಿದ್ದಾರೆ.
ಡಿಸೆಂಬರ್ 13ರಂದು ನಡೆದ ಬಹುನಿರೀಕ್ಷಿತ ‘GOAT’ ಕಾರ್ಯಕ್ರಮದಲ್ಲಿ ಮೆಸ್ಸಿಯನ್ನು ನೋಡಲು ಸಾವಿರಾರು ಅಭಿಮಾನಿಗಳು ದುಬಾರಿ ಬೆಲೆಯ ಟಿಕೆಟ್ ಖರೀದಿಸಿ ಸ್ಟೇಡಿಯಂಗೆ ಆಗಮಿಸಿದ್ದರು. ನಿಗದಿತ ಕಾರ್ಯಕ್ರಮದ ಪ್ರಕಾರ ಮೆಸ್ಸಿ ಮೈದಾನದ ಸುತ್ತಲೂ ಪ್ರದಕ್ಷಿಣೆ ಬರಬೇಕಿತ್ತು. ಆದರೆ, ಕಾರ್ಯಕ್ರಮದಲ್ಲಿ ಉಂಟಾದ ಭೀಕರ ಅವ್ಯವಸ್ಥೆಯಿಂದಾಗಿ ಮೆಸ್ಸಿ ಕೇವಲ 10 ನಿಮಿಷಗಳಲ್ಲಿ ಮೈದಾನದಿಂದ ಹೊರನಡೆದರು.
ಸಾವಿರಾರು ರೂಪಾಯಿ ನೀಡಿ ಮೆಸ್ಸಿಯ ಆಟ ಅಥವಾ ಕನಿಷ್ಠ ಅವರ ಮುಖವನ್ನಾದರೂ ಹತ್ತಿರದಿಂದ ನೋಡಬಹುದು ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಇದು ತೀವ್ರ ನಿರಾಸೆ ತಂದಿತು. ನಾವು ಮೆಸ್ಸಿಯನ್ನು ನೋಡಲೇ ಇಲ್ಲ, ಕೇವಲ ರಾಜಕಾರಣಿಗಳು ಮಾತ್ರ ಅವರ ಜೊತೆ ಫೋಟೋ ತೆಗೆಸಿಕೊಂಡು ಹ್ಯಾಂಡ್‌ಶೇಕ್ ಮಾಡಿದರು ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದರು.
ಮೆಸ್ಸಿ ಹೊರನಡೆಯುತ್ತಿದ್ದಂತೆ ಆಕ್ರೋಶಗೊಂಡ ಅಭಿಮಾನಿಗಳು ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ದಾಂಧಲೆ ನಡೆಸಿದರು. ಸ್ಟೇಡಿಯಂನ ಕುರ್ಚಿಗಳನ್ನು ಕಿತ್ತೆಸೆದಿದ್ದಲ್ಲದೆ, ನೀರಿನ ಬಾಟಲಿಗಳನ್ನು ಮೈದಾನದೊಳಕ್ಕೆ ಎಸೆದು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪ್ರಮುಖ ಸಂಘಟಕ ಶತಾದ್ರು ದತ್ತ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲ್ಕತ್ತಾದಲ್ಲಿನ ಈ ಘಟನೆ ನಂತರ ಮೆಸ್ಸಿ ಹೈದರಾಬಾದ್, ಮುಂಬೈ ಮತ್ತು ದೆಹಲಿಗೆ ತೆರಳಿದ್ದರು. ಅಚ್ಚರಿಯೆಂದರೆ ಈ ನಗರಗಳಲ್ಲಿ ಯಾವುದೇ ಗೊಂದಲವಿಲ್ಲದೆ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮಗಳು ನಡೆದವು. ಕೋಲ್ಕತ್ತಾದಲ್ಲಾದ ಈ ಘಟನೆಯಿಂದ ಇದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಮತ್ತು ಕ್ರೀಡಾ ಇಲಾಖೆಗೆ ಮುಖಭಂಗವಾಯಿತು.
ವಿರೋಧ ಪಕ್ಷಗಳು ಮತ್ತು ಕ್ರೀಡಾ ಪ್ರೇಮಿಗಳಿಂದ ಸತತ ಒತ್ತಡ ಕೇಳಿಬಂದ ಹಿನ್ನೆಲೆಯಲ್ಲಿ ಅರೂಪ್ ಬಿಸ್ವಾಸ್ ತಮ್ಮ ವೈಫಲ್ಯದ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರವು ಈ ಕುರಿತು ಆಂತರಿಕ ತನಿಖೆಗೂ ಆದೇಶಿಸಿದೆ.





