ತೆಲಂಗಾಣ: ವಿಶ್ವ ಫುಟ್ಬಾಲ್ ಇತಿಹಾಸದಲ್ಲೇ ಅತಿ ದೊಡ್ಡ ಸೂಪರ್ಸ್ಟಾರ್ಗಳಲ್ಲೊಬ್ಬರಾದ ಲಿಯೋನೆಲ್ ಮೆಸ್ಸಿ (Lionel Messi) ಅವರ ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ಭಾಗವಾಗಿ ಇಂದು (ಡಿ.13) ತೆಲಂಗಾಣ ರಾಜಧಾನಿ ಹೈದರಾಬಾದ್ಗೆ ಮೆಸ್ಸಿ ಆಗಮಿಸಿದ್ದು, ಅವರ ಭೇಟಿಯೇ ಫುಟ್ಬಾಲ್ ಅಭಿಮಾನಿಗಳಿಗೆ ಹಬ್ಬದಂತಾಗಿದೆ.
ಭಾರತೀಯ ಕಾಲಮಾನ ಸಂಜೆ 7:55ರ ಸುಮಾರಿಗೆ ಲಿಯೋನೆಲ್ ಮೆಸ್ಸಿ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿಂದ ನೇರವಾಗಿ ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣಕ್ಕೆ ಆಗಮಿಸಿದ ಮೆಸ್ಸಿಗೆ ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದರು. ಸ್ಟೇಡಿಯಂ ಸುತ್ತಮುತ್ತ ಭಾರಿ ಭದ್ರತೆ ಕೈಗೊಳ್ಳಲಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಫುಟ್ಬಾಲ್ ಅಭಿಮಾನಿಗಳು ನೆರೆದಿದ್ದರು.
ಇಂದು ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ GOAT ಕಪ್ ಪ್ರದರ್ಶನ ಪಂದ್ಯವನ್ನು ವೀಕ್ಷಿಸಲು ಪ್ರೇಕ್ಷಕರು ಬೆಳಗ್ಗಿನಿಂದಲೇ ಕ್ರೀಡಾಂಗಣದತ್ತ ಹರಿದು ಬಂದಿದ್ದರು. ಮೆಸ್ಸಿ ಆಗಮಿಸುವ ಸುದ್ದಿ ಕೇಳುತ್ತಿದ್ದಂತೆಯೇ ಅಭಿಮಾನಿಗಳ ಉತ್ಸಾಹದಿಂದ ತುಂಬಿತ್ತು. ಸ್ಟೇಡಿಯಂ ಒಳಗೆ ಮೆಸ್ಸಿ ಹೆಸರು ಘೋಷಣೆಯಾಗುತ್ತಿದ್ದಂತೆ, “ಮೆಸ್ಸಿ… ಮೆಸ್ಸಿ…” ಎಂಬ ಘೋಷಣೆಗಳು ಮುಗಿಲು ಮುಟ್ಟಿತ್ತು.
ಪ್ರದರ್ಶನ ಪಂದ್ಯ ಮುಕ್ತಾಯವಾದ ನಂತರ, ಲಿಯೋನೆಲ್ ಮೆಸ್ಸಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರೊಂದಿಗೆ ಮೈದಾನಕ್ಕೆ ಎಂಟ್ರಿಯಾದರು. ಇಬ್ಬರೂ ಒಂದೇ ಮೈದಾನದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿತ್ತು. ನಂತರ ಮೆಸ್ಸಿಯ ಕೈಯಿಂದ ಚೆಂಡು ಪಡೆದುಕೊಂಡ ರೇವಂತ್ ರೆಡ್ಡಿ ಗೋಲ್ಗೆ ಶಾಟ್ ಹೊಡೆದು ಯಶಸ್ವಿಯಾಗಿ ಗೋಲ್ ಬಾರಿಸಿದರು.
ಈ ಕ್ಷಣ ಕಂಡ ಪ್ರೇಕ್ಷಕರು ಹರ್ಷದಿಂದ ಕುಣಿದು ಕುಪ್ಪಳಿಸಿದರು. ಸ್ಟೇಡಿಯಂನೊಳಗಿನ ವಾತಾವರಣ ಸಂಪೂರ್ಣವಾಗಿ ಹಬ್ಬದ ರೂಪ ಪಡೆದುಕೊಂಡಿತ್ತು. ಮೆಸ್ಸಿ ಸ್ಮೈಲ್ನೊಂದಿಗೆ ಅಭಿಮಾನಿಗಳಿಗೆ ಕೈಬೀಸಿ ಅಭಿನಂದನೆ ಸಲ್ಲಿಸಿದ ದೃಶ್ಯ ಎಲ್ಲರ ಮನಗೆದ್ದಿತ್ತು.
ಮೆಸ್ಸಿ ಮತ್ತು ರೇವಂತ್ ರೆಡ್ಡಿ ಜೊತೆಯಾಗಿ ಫುಟ್ಬಾಲ್ ಆಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಭಿಮಾನಿಗಳು “GOAT meets CM”, “Hyderabad witnesses history” ಎಂಬ ಕಾಮೆಂಟ್ಗಳ ಮೂಲಕ ತಮ್ಮ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.





