ಹೊಸದಿಲ್ಲಿ, ಮಾರ್ಚ್ 30: ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದ ಲಷ್ಕರ್-ಎ-ತೊಯ್ದಾ (ಎಲ್ಇಟಿ) ಉಗ್ರನನ್ನು ದೆಹಲಿ ಗಡಿಯ ಬಳಿ ಬಂಧಿಸಲಾಗಿದೆ. ಈತ ಬಾಂಗ್ಲಾದೇಶದಿಂದ ಕಾರ್ಯನಿರ್ವಹಿಸುತ್ತಾ ಭಾರತದಲ್ಲಿ ದಾಳಿಗಳನ್ನು ಸಂಚು ರೂಪಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಶಬ್ಬಿರ್ ಅಹ್ಮದ್ ಲೋನ್ ಎಂದು ಗುರುತಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಜಿಲ್ಲೆಯ ಕಂಗನ್ ನಿವಾಸಿಯಾಗಿದ್ದಾನೆ.
ಯಾರೀ ಆರೋಪಿ?
ಬಂಧಿತ ಶಬ್ಬಿರ್ ಅಹ್ಮದ್ ಲೋನ್ ಅನ್ನು ಕಾಶ್ಮೀರಿ ಎಂದೂ ಕರೆಯಲಾಗುತ್ತೆ. ಭಾರತ ಕೇಂದ್ರಿತ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವಲ್ಲಿ ಈತ ಭಾಗಿಯಾಗಿದ್ದಾನೆ ಎಂಬ ಆರೋಪವಿದೆ. ಕೇಂದ್ರೀಯ ಸಂಸ್ಥೆಗಳ ಸಮನ್ವಯದೊಂದಿಗೆ ದೆಹಲಿ ಪೊಲೀಸರ ವಿಶೇಷ ಘಟಕವು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮೆಟ್ರೋ ಪೋಸ್ಟರ್ ಪ್ರಕರಣದ ಸಂಪರ್ಕ
ಬಂಧಿತ ಆರೋಪಿಯು ಮೆಟ್ರೋ ಪೋಸ್ಟರ್ ಪ್ರಕರಣದಲ್ಲಿ ಇತ್ತೀಚೆಗೆ ಬೇಧಿಸಲಾದ ಎಲ್ಇಟಿ ಮಾಡ್ಯೂಲ್‌ಗೆ ಸಂಬಂಧಿಸಿದ್ದಾನೆ. ಈ ಹಿಂದೆಯೇ ದೆಹಲಿ ಪೊಲೀಸರು ಫೆಬ್ರವರಿಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ದಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಭಯೋತ್ಪಾದಕ ಮಾಡ್ಯೂಲ್ ಅನ್ನು ಕಿತ್ತುಹಾಕಿದ್ದರು. ಆ ಮಾಡ್ಯೂಲ್‌ನ ನಿರ್ವಾಹಕ ಬಾಂಗ್ಲಾದೇಶದಿಂದ ಕಾರ್ಯನಿರ್ವಹಿಸುತ್ತಿದ್ದಾನೆಂದು ನಂಬಲಾಗಿತ್ತು.
ಬಾಂಗ್ಲಾದೇಶದಿಂದ ಕಾರ್ಯಾಚರಣೆ
ಈ ಉಗ್ರನೆಟ್ವರ್ಕ್ ಬಾಂಗ್ಲಾದೇಶದ ನೆಲದಿಂದ ಕಾರ್ಯನಿರ್ವಹಿಸುತ್ತಿದ್ದು, ಭಾರತದ ಯುವಕರನ್ನು ಉಗ್ರಗಾಮಿಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿತ್ತು. ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸುವುದು ಮತ್ತು ಸಂಚು ರೂಪಿಸುವುದು ಈ ಜಾಲದ ಪ್ರಮುಖ ಉದ್ದೇಶವಾಗಿತ್ತು.
ಈಗಾಗಲೇ 8 ಮಂದಿ ಬಂಧನ
ಕೋಲ್ಕತ್ತಾ ಮತ್ತು ತಮಿಳುನಾಡಿನಾದ್ಯಂತ ನಡೆದ ಸಂಘಟಿತ ಕಾರ್ಯಾಚರಣೆಗಳಲ್ಲಿ ಎಂಟು ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಏಳು ಮಂದಿ ಬಾಂಗ್ಲಾದೇಶಿ ಪ್ರಜೆಗಳು ಮತ್ತು ಪಶ್ಚಿಮ ಬಂಗಾಳದ ಒಬ್ಬ ಭಾರತೀಯ ಪ್ರಜೆ ಸೇರಿದ್ದಾರೆ.
ಯುವಕರನ್ನು ಉಗ್ರರನ್ನಾಗಿ ಮಾಡುವ ಪ್ರಯತ್ನ
ಲಷ್ಕರ್-ಎ-ತೊಯ್ದಾ ಸಂಘಟನೆಯು ಭಾರತದ ಯುವಕರನ್ನು ತನ್ನ ವಶಕ್ಕೆ ತೆಗೆದುಕೊಂಡು ಅವರನ್ನು ಉಗ್ರಗಾಮಿಗಳನ್ನಾಗಿ ಮಾರ್ಪಡಿಸುವ ಪ್ರಯತ್ನದಲ್ಲಿತ್ತು. ಸಾಮಾಜಿಕ ಜಾಲತಾಣಗಳು ಮತ್ತು ಇತರ ಮಾಧ್ಯಮಗಳ ಮೂಲಕ ಯುವಕರನ್ನು ಪ್ರಭಾವಿತಗೊಳಿಸಿ, ಅವರನ್ನು ತನ್ನ ಬಲೆಗೆ ಬೀಳಿಸುತ್ತಿತ್ತು.





