ದೇಶದ ಪ್ರಮುಖ ಐವೇರ್ ಕಂಪನಿ ಲೆನ್ಸ್‌ಕಾರ್ಟ್ (Lenskart) ಉದ್ಯೋಗಿಗಳಿಗೆ ಹೊಸ ಡ್ರೆಸ್ ಕೋಡ್ ಜಾರಿಗೊಳಿಸಿ ವಿವಾದಕ್ಕೆ ಕಾರಣವಾಗಿದೆ. ಹಿಂದೂಗಳ ಸಾಂಪ್ರದಾಯಿಕ ಗುರುತುಗಳಾದ ಬಿಂದಿ, ಸಿಂಧೂರ (ಕುಂಕುಮ), ಕೈಗೆ ಕಟ್ಟುವ ಧಾರ್ಮಿಕ ದಾರಗಳ ಮೇಲೆ ನಿರ್ಬಂಧ ಹೇರಿದ್ದರೆ, ಹಿಜಾಬ್ ಧರಿಸಲು ಅವಕಾಶ ನೀಡಿದೆ ಎಂಬ ಆರೋಪಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿವೆ.
ಸುಪ್ರೀಂ ಕೋರ್ಟ್ ವಕೀಲೆ ಮತ್ತು BJP ನಾಯಕಿ ನಾಜಿಯಾ ಖಾನ್ ಅವರು ಲೆನ್ಸ್‌ಕಾರ್ಟ್ ಅಂಗಡಿಗೆ ಭೇಟಿ ನೀಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಡಿಯೋದಲ್ಲಿ ಅವರು ಅಂಗಡಿ ವ್ಯವಸ್ಥಾಪಕರೊಂದಿಗೆ ವಾದಿಸುತ್ತಾ, “ಭಾರತದಲ್ಲಿ ಶರಿಯತ್ ಕಾನೂನು ಜಾರಿಗೊಳಿಸುವ ಯೋಜನೆಯೇ?” ಎಂದು ಪ್ರಶ್ನಿಸುತ್ತಿರುವುದು ಕಾಣುತ್ತದೆ.
ಲೆನ್ಸ್‌ಕಾರ್ಟ್ ಅಧಿಕೃತ ಮಾರ್ಗಸೂಚಿಗಳಲ್ಲಿ ಮಹಿಳಾ ಉದ್ಯೋಗಿಗಳು ಬಿಂದಿ ಇಡುವಂತಿಲ್ಲ, ಸಿಂಧೂರ ಅತೀ ಕಡಿಮೆಯಾಗಿ ಹಣೆಯ ಮೇಲೆ ಕಾಣಿಸದಂತೆ ಧರಿಸಬೇಕು ಎಂದು ಸೂಚಿಸಲಾಗಿದೆ. ಕೈಗೆ ಧಾರ್ಮಿಕ ದಾರ ಅಥವಾ ರಿಸ್ಟ್ ಬ್ಯಾಂಡ್ ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆದರೆ ಹಿಜಾಬ್‌ಗೆ ವಿಶೇಷ ಅವಕಾಶ ನೀಡಲಾಗಿದೆ ಎಂಬುದು ವಿವಾದಕ್ಕೆ ಕಾರಣವಾಗಿದೆ.

ನಾಜಿಯಾ ಖಾನ್ ಅವರು ಅಂಗಡಿಯಲ್ಲಿ ಹಿಂದೂ ಉದ್ಯೋಗಿಗಳಿಗೆ ಕುಂಕುಮ ಹಚ್ಚಿಸಿ, ಬಿಂದಿ ಅಂಟಿಸಿ, ಧೈರ್ಯವಾಗಿ ವಾಗ್ದಾಳಿ ಮಾಡಿದ್ದಾರೆ. ಸಿಬ್ಬಂದಿ ಬೆವರಿಳಿಸುತ್ತಾ ತಡಬಡಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಕೊನೆಗೆ ಅಲ್ಲಿದ್ದ ಹಿಂದೂ ಮಹಿಳೆಯರು ಮತ್ತು ಪುರುಷರಿಗೆ ಬಿಂದಿ ಹಚ್ಚಿಸಿ, ಕಲಾವಾ ಕಟ್ಟಿಸಿದ್ದಾರೆ. ಈ ಧೈರ್ಯದ ಕ್ರಿಯೆಗೆ ಸೋಷಿಯಲ್ ಮೀಡಿಯಾದಲ್ಲಿ ಶ್ಲಾಘನೆಗಳ ಮಹಾಪೂರ ಹರಿದುಬಂದಿದೆ.
ಈ ಘಟನೆ ನಾಸಿಕ್‌ನ ಟಿಸಿಎಸ್ ಕಂಪನಿಯಲ್ಲಿ ನಡೆದ ‘ಕಾರ್ಪೋರೇಟ್ ಜಿಹಾದ್’ ಪ್ರಕರಣದ ಹಿನ್ನೆಲೆಯಲ್ಲಿ ಹೆಚ್ಚು ಗಮನ ಸೆಳೆದಿದೆ. ಲೆನ್ಸ್‌ಕಾರ್ಟ್ ಕಂಪನಿ ಇದುವರೆಗೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.





