ಕೇರಳ: ಕೇರಳದ ಎರ್ನಾಕುಲಂ ಜಿಲ್ಲೆಯ ಸೇಂಟ್ ರೀಟಾ ಪಬ್ಲಿಕ್ ಶಾಲೆಯಲ್ಲಿ ಹಿಜಾಬ್ ಧರಿಸಿ ಬಂದಿದ್ದ 8ನೇ ತರಗತಿಯ ವಿದ್ಯಾರ್ಥಿನಿಯನ್ನು ಶಾಲಾ ಆಡಳಿತ ಮಂಡಳಿ ಒಳಗೆ ಬಿಡದೇ ತಡೆದ ಘಟನೆಯು ಭಾರೀ ವಿವಾದಕ್ಕೆ ಕಾರಣವಾಗಿದೆ. ವಿದ್ಯಾರ್ಥಿನಿಯ ಪೋಷಕರು ಮತ್ತು ಕೆಲವು ಸಂಘಟನೆಗಳು ಶಾಲೆಯ ನಿರ್ಧಾರವನ್ನು ಖಂಡಿಸಿದ್ದರೆ, ಶಾಲಾ ಆಡಳಿತ ಮಂಡಳಿಯು ತನ್ನ ನಿಲುವನ್ನು ದೃಢವಾಗಿ ಸಮರ್ಥಿಸಿಕೊಂಡಿದೆ.
ಘಟನೆಯ ಹಿನ್ನೆಲೆ
ಸೇಂಟ್ ರೀಟಾ ಪಬ್ಲಿಕ್ ಶಾಲೆಯು ಕ್ರೈಸ್ತ ಸಮುದಾಯದಿಂದ ನಿರ್ವಹಿಸಲ್ಪಡುತ್ತಿರುವ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯಾಗಿದೆ. ಶಾಲೆಯು ತನ್ನ ವಿದ್ಯಾರ್ಥಿಗಳಿಗೆ ಕಡ್ಡಾಯ ಸಮವಸ್ತ್ರ ನಿಯಮವನ್ನು ಜಾರಿಗೊಳಿಸಿದ್ದು, ಇದು ಶಾಲಾ ಆಡಳಿತ ಮಂಡಳಿಯ ಪ್ರಕಾರ ಶಿಸ್ತು ಮತ್ತು ಸಮಾನತೆಯನ್ನು ಕಾಪಾಡುವ ಉದ್ದೇಶದಿಂದಾಗಿದೆ.
ಮುಸ್ಲಿಂ ಸಮುದಾಯಕ್ಕೆ ಸೇರಿದ 8ನೇ ತರಗತಿಯ ಬಾಲಕಿಯು ಹಿಜಾಬ್ ಧರಿಸಿ ಶಾಲೆಗೆ ಬಂದಾಗ, ಶಾಲಾ ಪ್ರಾಂಶುಪಾಲರು ಮತ್ತು ಶಿಕ್ಷಕರು ಅದನ್ನು ತೆಗೆದುಕೊಂಡು ಮಾತ್ರ ತರಗತಿಗೆ ಸೇರಲು ಅನುಮತಿ ನೀಡುವಂತೆ ತಾಕೀತು ಮಾಡಿದರು. ಬಾಲಕಿಯು ಇದನ್ನು ನಿರಾಕರಿಸಿದ್ದರಿಂದ, ಅವಳನ್ನು ಶಾಲೆಯ ಹೊರಗೆ ನಿಲ್ಲಿಸಿ ದಿನಪೂರ್ತಿ ತರಗತಿಗಳಿಂದ ಹೊರಗಿಡಲಾಯಿತು.
ಬಾಲಕಿಯು ತನ್ನ ಅನುಭವವನ್ನು ಹಂಚಿಕೊಳ್ಳುತ್ತಾ, “ಶಾಲೆಯಲ್ಲಿ ನನಗೆ ಹಿಜಾಬ್ ಧರಿಸಲು ಬಿಡ್ತಿಲ್ಲ. ಅವರು ನನ್ನನ್ನು ಹೊರಗೆ ನಿಲ್ಲಿಸಿ ದುರ್ವರ್ತನೆ ತೋರಿದ್ದಾರೆ. ಶಿಕ್ಷಕರು ನನ್ನ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ” ಎಂದು ಆಕ್ಷೇಪಿಸಿದ್ದಾಳೆ. ಈ ಘಟನೆಯು ಬಾಲಕಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಅವಳ ಪೋಷಕರು ಶಾಲೆಯ ವಿರುದ್ಧ ದೂರು ದಾಖಲಿಸುವ ಉದ್ದೇಶ ಹೊಂದಿದ್ದಾರೆ.
ಮತ್ತೊಂದೆಡೆ, ಶಾಲಾ ಆಡಳಿತ ಮಂಡಳಿಯು ಬಾಲಕಿಯ ಆರೋಪಗಳನ್ನು ತೀವ್ರವಾಗಿ ಖಂಡಿಸಿದೆ. “ಇದು ಕ್ರೈಸ್ತರು ನಿರ್ವಹಿಸುತ್ತಿರುವ ಶಾಲೆಯ ವಿರುದ್ಧ ವ್ಯವಸ್ಥಿತ ಷಡ್ಯಂತ್ರವಾಗಿದೆ. ಇವೆಲ್ಲವೂ ಎಡಿಪಿಐ ಪಕ್ಷದ ಕುತಂತ್ರಗಳು” ಎಂದು ಆಡಳಿತ ಮಂಡಳಿಯ ಸದಸ್ಯರು ಹೇಳಿದ್ದಾರೆ.