ಉತ್ತರ ಪ್ರದೇಶ: ಝಾನ್ಸಿಯಲ್ಲಿ ರುಂಡವಿಲ್ಲದ ಮಹಿಳೆಯ ಶವವೊಂದು ಕಳೆದ ವಾರ ಪತ್ತೆಯಾಗಿತ್ತು. 35 ವರ್ಷದ ರಚನಾ ಯಾದವ್ ಎಂಬ ಮಹಿಳೆಯನ್ನು ಆಕೆಯ ಪ್ರಿಯಕರ, ಗ್ರಾಮದ ಮಾಜಿ ಮುಖ್ಯಸ್ಥ ಸಂಜಯ್ ಪಟೇಲ್, ತನ್ನ ಸಂಬಂಧಿ ಸಂದೀಪ್ ಪಟೇಲ್ ಮತ್ತು ಸ್ನೇಹಿತ ಪ್ರದೀಪ್ ಅಲಿಯಾಸ್ ದೀಪಕ್ ಅಹಿರ್ವಾರ್ ಜೊತೆ ಸೇರಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಚನಾ ತನ್ನನ್ನು ಮದುವೆಯಾಗುವಂತೆ ಸಂಜಯ್‌ನನ್ನು ಒತ್ತಡ ಹೇರಿದ್ದಳು. ಆದರೆ, ಈಗಾಗಲೇ ವಿವಾಹಿತನಾಗಿದ್ದ ಸಂಜಯ್‌ಗೆ ಇಬ್ಬರು ಮಕ್ಕಳಿದ್ದು, ಆತ ಇದನ್ನು ತಿರಸ್ಕರಿಸಿದ್ದ. ಆಗಸ್ಟ್ 9ರಂದು, ಸಂಜಯ್ ಮತ್ತು ಆತನ ಸಹಚರರು ರಚನಾಳ ಕತ್ತು ಹಿಸುಕಿ ಕೊಲೆ ಮಾಡಿದ್ದರು. ನಂತರ ಆಕೆಯ ದೇಹವನ್ನು ಏಳು ತುಂಡುಗಳಾಗಿ ಕತ್ತರಿಸಿ, ಚೀಲಗಳಲ್ಲಿ ತುಂಬಿ ಬಾವಿಗೆ ಎಸೆದಿದ್ದರು. ಗುರುತು ಸಿಗದಂತೆ ತಲೆ ಮತ್ತು ಕಾಲುಗಳನ್ನು ಲಖೇರಿ ನದಿಗೆ ಎಸೆಯಲಾಗಿತ್ತು. ಆಗಸ್ಟ್ 13ರಂದು ಕೊಳೆತ ಶವವನ್ನು ಗ್ರಾಮಸ್ಥರು ಪತ್ತೆ ಮಾಡಿದರು. ಬಾವಿಯನ್ನು ಸಂಪೂರ್ಣವಾಗಿ ಖಾಲಿ ಮಾಡಿದರೂ, ರುಂಡ ಸಿಗಲಿಲ್ಲ.
ಗ್ರಾಮಸ್ಥರು ಶವವನ್ನು ರಚನಾಳದ್ದು ಎಂದು ಶಂಕಿಸಿ, ಆಕೆಯ ಸಹೋದರ ದೀಪಕ್ ಯಾದವ್‌ಗೆ ಮಾಹಿತಿ ನೀಡಿದರು. ಫೋನ್ ದಾಖಲೆಗಳನ್ನು ಪರಿಶೀಲಿಸಿದಾಗ ಸಂಜಯ್ ಜೊತೆ ರಚನಾ ಪದೇ ಪದೇ ಸಂಪರ್ಕದಲ್ಲಿದಿದ್ದು ಕಂಡುಬಂದಿತ್ತು. ತಡರಾತ್ರಿ ಸಂಜಯ್‌ನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಆತ ಕೊಲೆಯನ್ನು ಒಪ್ಪಿಕೊಂಡಿದ್ದಾನೆ.
ಮಾಲ್ವಾರ ಗ್ರಾಮದ ನಿವಾಸಿಯಾದ ರಚನಾ, ಈ ಹಿಂದೆ ಎರಡು ಬಾರಿ ವಿವಾಹವಾಗಿದ್ದಳು ಮತ್ತು ಎರಡು ಮಕ್ಕಳಿದ್ದರು. ಎರಡನೇ ಗಂಡನನ್ನು ತೊರೆದ ಬಳಿಕ, ಆಕೆ ಮಹೇಬಾದ ಶಿವರಾಜ್ ಯಾದವ್ ಜೊತೆ ವಾಸವಾಗಿದ್ದಳು.
ಪೊಲೀಸರು ಸಂಜಯ್ ಮತ್ತು ಸಂದೀಪ್‌ನನ್ನು ಬಂಧಿಸಿದ್ದಾರೆ, ಆದರೆ ಪ್ರದೀಪ್ ತಲೆಮರೆಸಿಕೊಂಡಿದ್ದಾನೆ. ಆತನನ್ನು ಹಿಡಿದುಕೊಡುವವರಿಗೆ ಎಸ್‌ಎಸ್‌ಪಿ ಮೂರ್ತಿ 25,000 ರೂ. ಬಹುಮಾನ ಘೋಷಿಸಿದ್ದಾರೆ.





