370ನೇ ವಿಧಿ ರದ್ದತಿಯ ನಂತರ ಶಾಂತವಾಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡಿನ ದಾಳಿ ಮತ್ತೆ ಭುಗಿಲೆದ್ದಿದ್ದು, 28 ಹೆಚ್ಚೂ ಪ್ರವಾಸಿಗರನ್ನು ಬಲಿಪಡೆದಿದೆ. ಈ ದಾಳಿಯ ವಿರುದ್ಧ ಭಾರತದಾದ್ಯಂತ ಜನಾಕ್ರೋಶ ಭುಗಿಲೆದ್ದಿದ್ದು, ಪಾಕ್-ಬೆಂಬಲಿತ ಉಗ್ರರ ವಿರುದ್ಧ ವಿದೇಶಗಳಲ್ಲೂ ಖಂಡನೆಯ ಕೂಗು ಕೇಳಿಬಂದಿದೆ.
ದೇಶಾದ್ಯಂತ ಪ್ರತಿಭಟನೆ, ಬಂದ್
ಈ ಘಟನೆಯನ್ನು ಖಂಡಿಸಿ ಬುಧವಾರ ದೇಶಾದ್ಯಂತ ಪ್ರತಿಭಟನೆಗಳು, ಮೆರವಣಿಗೆಗಳು ಮತ್ತು ಖಂಡನಾ ಸಭೆಗಳು ನಡೆದಿವೆ. 35 ವರ್ಷಗಳ ಬಳಿಕ ಕಾಶ್ಮೀರದಲ್ಲಿ ಮೊದಲ ಬಾರಿಗೆ ಬಂದ್ ಆಚರಿಸಿ, ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗಿದೆ. 26 ಜನರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ದೇಶದಾದ್ಯಂತ ಬಲವಾದ ಆಗ್ರಹ ಕೇಳಿಬಂದಿದೆ.
ಕೇಂದ್ರ ಸರ್ಕಾರದ ಕಠಿಣ ಎಚ್ಚರಿಕೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, “ಉಗ್ರರನ್ನು ಮಾತ್ರವಲ್ಲ, ಅವರಿಗೆ ತೆರೆಮರೆಯಲ್ಲಿ ಕುಮ್ಮಕ್ಕು ನೀಡುವವರನ್ನೂ ಬಿಡುವುದಿಲ್ಲ” ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ. ಸೌದಿ ಅರೇಬಿಯಾ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ಮರಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎರಡು ಉನ್ನತ ಮಟ್ಟದ ಸಭೆಗಳನ್ನು ನಡೆಸಿದ್ದಾರೆ. ಅವರ ಮುಂದಿನ ಕ್ರಮ ಕುತೂಹಲ ಕೆರಳಿಸಿದ್ದು, ಭಾರತವು ಶೀಘ್ರದಲ್ಲೇ ಉಗ್ರರ ವಿರುದ್ಧ ಭಾರೀ ದಾಳಿಯನ್ನು ಆರಂಭಿಸಬಹುದೇ ಎಂಬ ಗುಮಾನಿ ಉಂಟಾಗಿದೆ.
ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ
2016ರ ಉರಿ ದಾಳಿಯ ನಂತರ ನಡೆದ ಸರ್ಜಿಕಲ್ ಸ್ಟ್ರೈಕ್ ಮತ್ತು 2019ರ ಪುಲ್ವಾಮಾ ದಾಳಿಯ ಬಳಿಕ ನಡೆಸಿದ ಬಾಲಾಕೋಟ್ ವಾಯು ದಾಳಿಯಂತೆ ಈ ಬಾರಿಯೂ ಉಗ್ರರ ಮೇಲೆ ತೀವ್ರ ಕಾರ್ಯಾಚರಣೆಗೆ ಒತ್ತಾಯಿಸಲಾಗಿದೆ. ಒಂದೆಡೆ ಉಗ್ರರಿಗೆ ಬಲಿಯಾದವರ ಕುಟುಂಬಗಳ ನರಳಾಟವನ್ನು ಕಂಡು ಭಾರತೀಯರು ಮಮ್ಮಲ ಮರುಗುತ್ತಿದ್ದಾರೆ. ಮತ್ತೊಂದೆಡೆ, ಉಗ್ರವಾದಕ್ಕೆ ಪೋಷಣೆ ನೀಡುವ ಪಾಕಿಸ್ತಾನದ ವಿರುದ್ಧ ಕಠಿಣಾತಿಕಠಿಣ ಕ್ರಮಕ್ಕೆ ಜನರು ಆಗ್ರಹಿಸುತ್ತಿದ್ದಾರೆ.
ಕಾಶ್ಮೀರದ ಶಾಂತಿಗೆ ಭಂಗ
370ನೇ ವಿಧಿಯ ರದ್ದತಿಯ ನಂತರ ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು. ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿತ್ತು. ಆದರೆ, ಈ ದಾಳಿಯಿಂದ ಶಾಂತಿಯ ವಾತಾವರಣಕ್ಕೆ ಭಂಗ ಉಂಟಾಗಿದ್ದು, ದೇಶಾದ್ಯಂತ ಆತಂಕ ಮತ್ತು ಆಕ್ರೋಶ ವ್ಯಕ್ತವಾಗಿದೆ.