ದೆಹಲಿ: 1980ರ ದಶಕದ ಆರಂಭದಲ್ಲಿ ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಪಾಕಿಸ್ತಾನದ ಕಹುತಾ ಪರಮಾಣು ಸೌಲಭ್ಯದ ಮೇಲೆ ನಡೆಸಲು ಯೋಜಿಸಿದ್ದ ರಹಸ್ಯ ಕಾರ್ಯಾಚರಣೆಯನ್ನು ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಅನುಮೋದಿಸಲಿಲ್ಲ ಎಂದು ಮಾಜಿ ಸಿಐಎ ಅಧಿಕಾರಿ ರಿಚರ್ಡ್ ಬಾರ್ಲೋ ಆರೋಪಿಸಿದ್ದಾರೆ. ಇದು ದಕ್ಷಿಣ ಏಷ್ಯಾದ ಪರಮಾಣು ರಾಜಕೀಯದಲ್ಲಿ ಮಹತ್ವದ ತಿರುವುಗಳನ್ನು ತರಬಹುದಿತ್ತು ಎಂದು ಅವರು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ನೀಡಿದ ಬಾರ್ಲೋ, ಈ ವಿಷಯವನ್ನು ಬಹಿರಂಗಪಡಿಸಿದ್ದು, “ಇಂದಿರಾ ಗಾಂಧಿ ಅದನ್ನು ಅನುಮೋದಿಸದಿರುವುದು ನಾಚಿಕೆಗೇಡಿನ ಸಂಗತಿ. ಅದು ನಡೆದಿದ್ದರೆ ಅನೇಕ ಸಮಸ್ಯೆಗಳು ಬಗೆಹರಿಯುತ್ತಿದ್ದವು” ಎಂದು ಹೇಳಿದ್ದಾರೆ.
ರಿಚರ್ಡ್ ಬಾರ್ಲೋ 1982ರಿಂದ 1985ರವರೆಗೆ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯಲ್ಲಿ (CIA) ಕಾರ್ಯನಿರ್ವಹಿಸಿದ್ದರು. “ಆ ಸಮಯದಲ್ಲಿ ಪಾಕಿಸ್ತಾನದ ಪರಮಾಣು ಯೋಜನೆ ವೇಗವಾಗಿ ಮುಂದುವರಿಯುತ್ತಿತ್ತು. ಭಾರತ ಮತ್ತು ಇಸ್ರೇಲ್‌ಗಳು ಅದನ್ನು ತಡೆಯುವ ಸಲುವಾಗಿ ಕಹುತಾದ ಮೇಲೆ ಪೂರ್ವಭಾವಿ ದಾಳಿಯ ಕುರಿತು ಚಿಂತನೆ ನಡೆಸಿದ್ದವು. ಆದರೆ, ಇಂದಿರಾ ಗಾಂಧಿ ಅದಕ್ಕೆ ಒಪ್ಪಿಗೆ ನೀಡಲಿಲ್ಲ. ಅದು ನಡೆದಿದ್ದರೆ ಇಂದಿನ ಅನೇಕ ತಂತ್ರಜ್ಞಾನ ಮತ್ತು ಭದ್ರತಾ ಸಮಸ್ಯೆಗಳು ಬಗೆಹರಿಯುತ್ತಿದ್ದವು,” ಎಂದು ತಿಳಿಸಿದ್ದಾರೆ.
🇮🇳 ಕಾರ್ಯಾಚರಣೆಯ ಉದ್ದೇಶ ಏನು?
ಪಾಕಿಸ್ತಾನವು ಕಹುತಾದಲ್ಲಿ ಯುರೇನಿಯಂ ಪುಷ್ಟಿಕರಣ ಘಟಕ ನಿರ್ಮಿಸುತ್ತಿತ್ತು. ಈ ಯೋಜನೆ ಯಶಸ್ವಿಯಾದರೆ ಪಾಕ್ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರು ಮಾಡುವ ಹಾದಿಯಲ್ಲಿ ಮುನ್ನಡೆಯುವುದು ಖಚಿತವಾಗಿತ್ತು. ಇದನ್ನು ತಡೆಯಲು ಭಾರತ ಮತ್ತು ಇಸ್ರೇಲ್ ಸೈನ್ಯಗಳು ಕಹುತಾದ ಮೇಲೆ ಅಚ್ಚರಿಯ ವೈಮಾನಿಕ ದಾಳಿ ನಡೆಸುವ ಯೋಜನೆ ರೂಪಿಸಿದ್ದವು. ಆದರೆ ಈ ಯೋಜನೆ ಬಹಿರಂಗವಾಗುವ ಭೀತಿ, ಅಮೆರಿಕದ ವಿರೋಧ ಮತ್ತು ಆಂತರಿಕ ರಾಜಕೀಯ ಒತ್ತಡಗಳ ಹಿನ್ನೆಲೆಯಲ್ಲಿ ಇಂದಿರಾ ಗಾಂಧಿ ಅಂತಿಮವಾಗಿ ‘ನೋ’ ಎಂದರು.
ಆ ಸಮಯದಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಅವರ ಆಡಳಿತ ಅಫ್ಘಾನಿಸ್ತಾನದಲ್ಲಿ ಸೋವಿಯತ್ ವಿರೋಧಿ ಯುದ್ಧಕ್ಕೆ ರಹಸ್ಯವಾಗಿ ಪಾಕಿಸ್ತಾನದ ಮೂಲಕ ಸಹಾಯ ನೀಡುತ್ತಿತ್ತು. ಕಹುತಾದ ಮೇಲೆ ದಾಳಿ ನಡೆದರೆ ಈ ಅಭಿಯಾನ ಸಂಪೂರ್ಣವಾಗಿ ಹಾಳಾಗಬಹುದಿತ್ತು. ಅದಕ್ಕಾಗಿ ಅಮೆರಿಕ ಯಾವುದೇ ರೀತಿಯ ಸೈನಿಕ ಕ್ರಮವನ್ನು ಬಲವಾಗಿ ವಿರೋಧಿಸಿತು ಎಂದು ಬಾರ್ಲೋ ಹೇಳಿದರು.
ಅಮೆರಿಕ ಪಾಕಿಸ್ತಾನವನ್ನು ಅಫ್ಘಾನಿಸ್ತಾನದಲ್ಲಿ ಸೋವಿಯತ್ ವಿರುದ್ಧದ ಹೋರಾಟದ ಪ್ರಮುಖ ಸಹಾಯಕರಾಗಿ ಬಳಸಿಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಪರಮಾಣು ಯೋಜನೆಗೆ ಕಣ್ಣನ್ನು ಮುಚ್ಚಿಕೊಂಡಿತ್ತು ಎಂಬ ಆರೋಪಗಳೂ ಬಾರ್ಲೋ ಅವರ ಹೇಳಿಕೆಯಲ್ಲಿ ವ್ಯಕ್ತವಾಗಿವೆ.
ಪಾಕ್‌ನ “ಬ್ಲ್ಯಾಕ್‌ಮೇಲ್” ತಂತ್ರ
ಪಾಕಿಸ್ತಾನದ ಅಣುಶಕ್ತಿ ಆಯೋಗದ ಮುಖ್ಯಸ್ಥ ಮುನೀರ್ ಅಹ್ಮದ್ ಖಾನ್ ಅಮೆರಿಕದ ಕೆಲ ಅಧಿಕಾರಿಗಳಿಗೆ “ನೀವು ನಮ್ಮ ಪರಮಾಣು ಚಟುವಟಿಕೆಗಳಿಗೆ ಅಡ್ಡಿಪಡಿಸಿದರೆ, ನಾವು ಮುಜಾಹಿದ್ದೀನ್‌ಗಳಿಗೆ ನೀಡುತ್ತಿರುವ ಸಹಕಾರವನ್ನು ನಿಲ್ಲಿಸುತ್ತೇವೆ” ಎಂದು ಎಚ್ಚರಿಸಿದ್ದರೆಂದು ಬಾರ್ಲೋ ಬಹಿರಂಗಪಡಿಸಿದರು. ಅದು ಅಮೆರಿಕದ ಕಳಪೆ ಸ್ಥಿತಿಯನ್ನು ಸದುಪಯೋಗ ಮಾಡಿಕೊಂಡ ಪಾಕಿಸ್ತಾನದ ರಾಜತಾಂತ್ರಿಕ ಬ್ಲ್ಯಾಕ್‌ಮೇಲ್ ತಂತ್ರವಾಗಿತ್ತು.
ಇಂದಿರಾ ಗಾಂಧಿಯ ನಿರ್ಧಾರವು ಅಂದು ವಿವಾದಾತ್ಮಕವಾಗಿದ್ದರೂ, ಅದು ಭಾರತದ ತಂತ್ರಜ್ಞಾನ ಮತ್ತು ರಾಜತಾಂತ್ರಿಕ ಸ್ಥಿರತೆಯನ್ನು ಕಾಯ್ದುಕೊಂಡಿತು ಎಂಬ ವಿಶ್ಲೇಷಣೆಗಳೂ ಇವೆ. ದಾಳಿ ನಡೆದಿದ್ದರೆ ಭಾರತ, ಪಾಕಿಸ್ತಾನ, ಇಸ್ರೇಲ್ ಮತ್ತು ಅಮೆರಿಕದ ಸಂಬಂಧಗಳು ಸಂಪೂರ್ಣವಾಗಿ ಹದಗೆಡುತ್ತಿದ್ದುವು.





