ನವದೆಹಲಿ: ಭಾರತೀಯ ರೈಲ್ವೆಯಲ್ಲಿ (Indian Railway) ಪ್ರಯಾಣಿಸುವ ಲಕ್ಷಾಂತರ ಪ್ರಯಾಣಿಕರಿಗೆ ಹೊಸ ವರ್ಷಕ್ಕೂ ಮುನ್ನ ಬಿಗ್ ಶಾಕ್ ಎದುರಾಗಿದೆ. ರೈಲ್ವೆ ಇಲಾಖೆ ಡಿಸೆಂಬರ್ 26ರಿಂದ ಜಾರಿಗೆ ಬರುವಂತೆ ಹೊಸ ರೈಲು ಟಿಕೆಟ್ ದರಗಳನ್ನು ಪರಿಷ್ಕರಿಸಿದೆ. ಪ್ರಯಾಣಿಕರಿಗೆ ಹೆಚ್ಚಿನ ಹೊರೆಯಾಗದಂತೆ ನೋಡಿಕೊಳ್ಳುವ ಜೊತೆಗೆ, ರೈಲ್ವೆ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ದರ ಪರಿಷ್ಕರಣೆ ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.
ಹೊಸ ದರದ ಪ್ರಕಾರ, 215 ಕಿಲೋಮೀಟರ್‌ಗಳವರೆಗೆ ಪ್ರಯಾಣಿಸುವ ಸಾಮಾನ್ಯ ದರ್ಜೆಯ ಟಿಕೆಟ್‌ಗಳ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇದರಿಂದ ಕಡಿಮೆ ದೂರದ ಪ್ರಯಾಣಿಕರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ದೊರೆತಿದೆ. ಆದರೆ, 215 ಕಿಮೀ ಮೀರಿದ ದೂರಕ್ಕೆ ಪ್ರಯಾಣಿಸುವವರ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ.
ಪ್ರತಿ ಕಿಮೀಗೆ ಎಷ್ಟು ಹೆಚ್ಚಳ?
ರೈಲ್ವೆ ಇಲಾಖೆ ಪ್ರಕಟಿಸಿರುವ ವಿವರಗಳ
-
215 ಕಿಮೀಗಿಂತ ಹೆಚ್ಚು ದೂರಕ್ಕೆ ಸಾಮಾನ್ಯ ಪ್ರಯಾಣಿಕರು ಪ್ರತಿ ಕಿಮೀಗೆ 1 ಪೈಸೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.
-
ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಹವಾನಿಯಂತ್ರಿತವಲ್ಲದ (Non-AC) ಕೋಚ್‌ಗಳಿಗೆ ಪ್ರತಿ ಕಿಮೀಗೆ 2 ಪೈಸೆ ಹೆಚ್ಚಳ ಮಾಡಲಾಗಿದೆ.
-
ಅದೇ ರೀತಿ, ಹವಾನಿಯಂತ್ರಿತ (AC) ಕೋಚ್‌ಗಳಲ್ಲೂ ಪ್ರತಿ ಕಿಮೀಗೆ 2 ಪೈಸೆ ಹೆಚ್ಚಳ ಜಾರಿಯಾಗಿದೆ.
500 ಕಿ.ಮೀ ಪ್ರಯಾಣಕ್ಕೆ ಎಷ್ಟು ಹೆಚ್ಚಾಗಿ ಕಟ್ಟಬೇಕು?
ಹೊಸ ದರ ಜಾರಿಗೆ ಬಂದ ನಂತರ, ಹವಾನಿಯಂತ್ರಿತವಲ್ಲದ ಬೋಗಿಗಳಲ್ಲಿ 500 ಕಿಲೋಮೀಟರ್ ಪ್ರಯಾಣಕ್ಕೆ ಸುಮಾರು 10 ರೂ. ಹೆಚ್ಚುವರಿ ವೆಚ್ಚವಾಗಲಿದೆ. ದೂರ ಪ್ರಯಾಣ ಮಾಡುವ ಮಧ್ಯಮ ಹಾಗೂ ದೀರ್ಘ ದೂರದ ಪ್ರಯಾಣಿಕರಿಗೆ ದರ ಏರಿಕೆಯಾಗಲಿದೆ.
ಈ ದರ ಪರಿಷ್ಕರಣೆಯಿಂದ ಈ ವರ್ಷ ಮಾತ್ರವೇ ಸುಮಾರು 6 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ದೊರೆಯುವ ಸಾಧ್ಯತೆ ಇದೆ. ಈ ಹಣವನ್ನು ರೈಲ್ವೆ ಮೂಲಸೌಕರ್ಯ ಸುಧಾರಣೆ, ಭದ್ರತೆ, ಸ್ವಚ್ಛತೆ ಹಾಗೂ ಆಧುನಿಕ ಸೌಲಭ್ಯಗಳ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಉಪನಗರ ಮತ್ತು ಸೀಸನ್ ಟಿಕೆಟ್‌ಗಳಿಗೆ ರಿಲೀಫ್
ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳಿಗೆ ಅನುಕೂಲವಾಗುವಂತೆ, ರೈಲ್ವೆ ಉಪನಗರ ರೈಲುಗಳು ಹಾಗೂ ಮಾಸಿಕ ಸೀಸನ್ ಟಿಕೆಟ್‌ಗಳ ದರದಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ದೈನಂದಿನ ಪ್ರಯಾಣಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರೈಲ್ವೆ ಸಚಿವಾಲಯ ಹೇಳಿದೆ.
ಹಿಂದಿನ ದರ ಏರಿಕೆಯ ಪರಿಣಾಮ
ರೈಲ್ವೆ ಸಚಿವಾಲಯದ ಮಾಹಿತಿಯಂತೆ, ಜುಲೈ 2025ರಲ್ಲಿ ಜಾರಿಗೊಂಡಿದ್ದ ಹಿಂದಿನ ದರ ಏರಿಕೆಯಿಂದ ಈಗಾಗಲೇ 700 ಕೋಟಿ ರೂಪಾಯಿ ಆದಾಯ ಲಭಿಸಿದೆ. ಆ ಸಂದರ್ಭದಲ್ಲಿ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳ ಹವಾನಿಯಂತ್ರಿತವಲ್ಲದ ವರ್ಗಕ್ಕೆ ಪ್ರತಿ ಕಿಮೀಗೆ 1 ಪೈಸೆ ಹಾಗೂ AC ವರ್ಗಕ್ಕೆ 2 ಪೈಸೆ ದರ ಹೆಚ್ಚಿಸಲಾಗಿತ್ತು.
ಕ್ರಿಸ್‌ಮಸ್–ಹೊಸ ವರ್ಷ ವಿಶೇಷ ರೈಲುಗಳು
ದರ ಏರಿಕೆಯ ನಡುವೆಯೇ, ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ 2025–26ರ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಅವಧಿಯಲ್ಲಿ ವಿಶೇಷ ರೈಲುಗಳನ್ನು ಘೋಷಿಸಿದೆ. ದೇಶದ ಎಂಟು ವಲಯಗಳಲ್ಲಿ ಒಟ್ಟು 244 ವಿಶೇಷ ಟ್ರಿಪ್‌ಗಳನ್ನು ಸೇರಿಸಲಾಗಿದ್ದು, ದೆಹಲಿ, ಹೌರಾ, ಲಕ್ನೋ ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸುವ ಕಾರ್ಯನಿರತ ಕಾರಿಡಾರ್‌ಗಳಲ್ಲಿ ಈ ವಿಶೇಷ ರೈಲುಗಳು ಸಂಚರಿಸಲಿವೆ.





