ಭಾರತ ಮತ್ತು ರಷ್ಯಾದ ನಡುವಿನ ಕಚ್ಚಾತೈಲ ಸಂಬಂಧವು ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದೆ. ಅಮೆರಿಕದ ಒತ್ತಡ ಮತ್ತು ಸುಂಕದ ಹೊರೆಯನ್ನು ಧಿಕ್ಕರಿಸಿ, ರಷ್ಯಾ, ಭಾರತಕ್ಕೆ ಕಚ್ಚಾತೈಲದ ಮೇಲೆ ಮತ್ತೊಂದು ರಿಯಾಯಿತಿಯನ್ನು ಘೋಷಿಸಿದೆ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಲೋಡ್ ಆಗುವ ರಷ್ಯಾದ ಉರಲ್ ದರ್ಜೆಯ ಕಚ್ಚಾತೈಲಕ್ಕೆ ಬ್ಯಾರೆಲ್‌ಗೆ 3 ರಿಂದ 4 ಡಾಲರ್ ರಿಯಾಯಿತಿ ನೀಡಲಾಗುವುದು. ಈ ರಿಯಾಯಿತಿಯು ಭಾರತಕ್ಕೆ ಆರ್ಥಿಕ ಲಾಭವನ್ನು ತಂದುಕೊಡುತ್ತದೆ.
ಇತ್ತೀಚೆಗೆ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟ (ಎಸ್‌ಸಿಒ) ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದ್ವಿಪಕ್ಷೀಯ ಸಭೆ ನಡೆಸಿದ್ದರು. ಈ ಸಭೆಯ ಕೆಲವೇ ದಿನಗಳಲ್ಲಿ ರಷ್ಯಾದ ಈ ರಿಯಾಯಿತಿ ಘೋಷಣೆಯು ಎರಡೂ ರಾಷ್ಟ್ರಗಳ ನಡುವಿನ ವಿಶ್ವಾಸ ಮತ್ತು ಸಹಕಾರವನ್ನು ಬಲಪಡಿಸಿದೆ. ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿಯನ್ನು ಮುಂದುವರೆಸಿರುವುದು, ಉಕ್ರೇನ್ ಯುದ್ಧಕ್ಕೆ ಉತ್ತೇಜನ ನೀಡುತ್ತಿದೆ ಎಂಬ ಆರೋಪದ ಮೇಲೆ ಅಮೆರಿಕದಿಂದ ಟೀಕೆಗೆ ಗುರಿಯಾಗಿದೆ. ಆದರೆ, ಭಾರತವು ತನ್ನ ಆರ್ಥಿಕ ಮತ್ತು ರಾಜತಾಂತ್ರಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡುತ್ತಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಭಾರತದ ಸರಕುಗಳ ಮೇಲೆ ಶೇ.50ರಷ್ಟು ಸುಂಕ ಹೇರಿದೆ. ಈ ಕ್ರಮವನ್ನು ವಿರೋಧಿಸಿರುವ ಭಾರತವು ರಷ್ಯಾ ಮತ್ತು ಚೀನಾದೊಂದಿಗೆ ತನ್ನ ವಾಣಿಜ್ಯ ಮತ್ತು ರಾಜತಾಂತ್ರಿಕ ಸಂಬಂಧವನ್ನು ಬಲಪಡಿಸುವ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ. ಎಸ್‌ಸಿಒ ಶೃಂಗಸಭೆಯಲ್ಲಿ ಭಾರತ, ರಷ್ಯಾ ಮತ್ತು ಚೀನಾದ ಒಗ್ಗಟ್ಟು ಅಮೆರಿಕಕ್ಕೆ ತಿರುಗುಬಾಣವಾಗಿದೆ.
ಅಮೆರಿಕದ ವ್ಯಾಪಾರ ಸಲಹೆಗಾರ ಪೀಟರ್ ನವರೋ ಇತ್ತೀಚೆಗೆ ಭಾರತದ ಕಚ್ಚಾತೈಲ ಖರೀದಿಯನ್ನು ಟೀಕಿಸಿ, “ಭಾರತ ಉನ್ನತ ವರ್ಗಕ್ಕೆ ಲಾಭ ಮಾಡಿಕೊಡಲು ಜನರ ದುಡ್ಡಿನಲ್ಲಿ ರಷ್ಯಾದೊಂದಿಗೆ ವರ್ತಿಸುತ್ತಿದೆ” ಎಂದು ಆರೋಪಿಸಿದ್ದರು. ಈ ಹೇಳಿಕೆಯು ಭಾರತದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಭಾರತವು ತನ್ನ ಜನರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡಲು ರಷ್ಯಾದೊಂದಿಗಿನ ತೈಲ ವಾಣಿಜ್ಯವನ್ನು ಮುಂದುವರೆಸಿದೆ.
 
			
 
					




 
                             
                             
                             
                             
                            