ನವದೆಹಲಿ: ದಿತ್ವಾ ಚಂಡಮಾರುತದಿಂದ ಶ್ರೀಲಂಕೆ ಸಂಪೂರ್ಣ ನಲುಗಿ ಹೋಗಿದೆ. ಈ ಭೀಕರ ನೈಸರ್ಗಿಕ ವಿಕೋಪದಲ್ಲಿ ಇದುವರೆಗೆ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ, ಲಕ್ಷಾಂತರ ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಸಾವಿರಾರು ಮನೆಗಳು ಧ್ವಂಸವಾಗಿವೆ, ರಸ್ತೆ-ರೈಲು ಸಂಪರ್ಕ ಕಡಿತಗೊಂಡಿದೆ. ವಿದ್ಯುತ್-ನೀರು ಸಂಪೂರ್ಣ ಸ್ತಂಭನವಾಗಿದೆ. ಈ ದುರಂತದ ನಡುವೆಯೇ ಶ್ರೀಲಂಕಾ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ ಮತ್ತು ಅಂತಾರಾಷ್ಟ್ರೀಯ ಸಮುದಾಯದಿಂದ ನೆರವು ಕೋರಿದೆ.
ಈ ಸಂಕಷ್ಟದ ಸಮಯದಲ್ಲಿ ಪಾಕಿಸ್ತಾನ ಸಹ ಶ್ರೀಲಂಕೆಗೆ ನೆರವು ನೀಡಲು ಮುಂದಾಗಿತ್ತು. ಆದರೆ ಪಾಕ್ ವಾಯುಸೇನೆಯ ಸಿ-130 ಜೆ ವಿಮಾನವೊಂದು ಶ್ರೀಲಂಕಾಕ್ಕೆ ಪರಿಹಾರ ಸಾಮಗ್ರಿಗಳನ್ನು ಒಯ್ಯಲು ಭಾರತೀಯ ವಾಯುಪ್ರದೇಶದ ಮೇಲೆ ಹಾರಬೇಕಿತ್ತು. ಈ ವೇಳೆ ಪಾಕಿಸ್ತಾನದ ಕೆಲವು ಮಾಧ್ಯಮಗಳು ಹಾಗೂ ಆನ್‌ಲೈನ್ ಖಾತೆಗಳು “ಭಾರತ ತನ್ನ ವಾಯುಮಾರ್ಗವನ್ನು ಮುಚ್ಚಿ, ಶ್ರೀಲಂಕಾ ನೆರವಿಗೆ ಅಡ್ಡಿಯಾಡುತ್ತಿದೆ” ಎಂದು ಆರೋಪ ಮಾಡಿ ದೊಡ್ಡ ಗಾಳಿ ಸುದ್ದಿ ಹರಿದ್ದವು. ಆದರೆ ಈ ಆರೋಪಕ್ಕೆ 24 ಗಂಟೆಯೊಳಗೇ ಭಾರತ ಉತ್ತರ ನೀಡಿದೆ.
ಮಾಹಿತಿ ಪ್ರಕಾರ, ಡಿಸೆಂಬರ್ 1ರಂದು ಮಧ್ಯಾಹ್ನ 1:00 ಗಂಟೆಗೆ ಪಾಕಿಸ್ತಾನದ ವಾಯುಸೇನೆಯು ಭಾರತೀಯ ವಾಯುಪ್ರದೇಶದ ಮೇಲೆ ಹಾರಲು ಅನುಮತಿ ಕೋರಿ ಅರ್ಜಿ ಸಲ್ಲಿಸಿತ್ತು. ಕೇವಲ ನಾಲ್ಕೇ ಗಂಟೆಗಳಲ್ಲಿ ಅಂದರೆ ಸಂಜೆ 5 ಗಂಟೆಯೊಳಗೆ ಭಾರತ ಸಂಪೂರ್ಣ ಅನುಮತಿ ನೀಡಿತ್ತು. ಇದು ತುರ್ತು ಮಾನವೀಯ ಕಾರ್ಯಾಚರಣೆಯಾಗಿದ್ದ ಕಾರಣ ಭಾರತ ತನ್ನ ಎಲ್ಲಾ ನಿಯಮಗಳನ್ನು ವೇಗವಾಗಿ ಪೂರೈಸಿ, ಪಾಕ್ ವಿಮಾನಕ್ಕೆ “ಗ್ರೀನ್ ಕಾರಿಡಾರ್” ಒದಗಿಸಿತು. ಈ ವಿಮಾನ ಡಿಸೆಂಬರ್ 2ರ ಬೆಳಗ್ಗೆಯೇ ಕೊಲಂಬೋಗೆ ತಲುಪಿ ನೆರವು ಸಾಮಗ್ರಿಗಳನ್ನು ಇಳಿಸಿದೆ ಎಂದು ತಿಳಿದುಬಂದಿದೆ.
ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರರು ಸ್ಪಷ್ಟವಾಗಿ ಹೇಳಿದ್ದಾರೆ. “ತುರ್ತು ಮಾನವೀಯ ಸ್ಥಿತಿಯಲ್ಲಿ ಯಾವುದೇ ರಾಜಕೀಯ ಅಥವಾ ದ್ವೇಷ ಮನೋಭಾವಕ್ಕೆ ಆಸ್ಪದವಿಲ್ಲ. ನಾವು ಕೇವಲ ಕೆಲವೇ ಗಂಟೆಗಳಲ್ಲಿ ಅನುಮತಿ ನೀಡಿದ್ದೇವೆ. ಆರೋಪಗಳು ಸಂಪೂರ್ಣ ಸುಳ್ಳು.” ಈ ಹೇಳಿಕೆಯಿಂದ ಪಾಕ್ ಮಾಧ್ಯಮಗಳ ದುರ್ಬಳಕೆ ಸ್ಪಷ್ಟವಾಗಿದೆ ಎಂದಿದ್ದಾರೆ.
ಇನ್ನು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಅವರೊಂದಿಗೆ ದೂರವಾಣಿ ಕರೆ ಮಾಡಿ ಸಂತಾಪ ಸೂಚಿಸಿದ್ದಲ್ಲದೆ, “ಆಪರೇಷನ್ ಸಾಗರ್ ಬಂಧು” ಅಡಿಯಲ್ಲಿ ಎಲ್ಲ ಬಗೆಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ಭಾರತೀಯ ನೌಕಾಪಡೆಯ ಹಡಗುಗಳು, ವಾಯುಸೇನೆಯ ಸಿ-17 ಗ್ಲೋಬ್‌ಮಾಸ್ಟರ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ಶ್ರೀಲಂಕಾದಲ್ಲಿವೆ. ಔಷಧಗಳು, ಆಹಾರ, ಕುಡಿಯುವ ನೀರು, ತಾತ್ಕಾಲಿಕ ಆಶ್ರಯ ಸಾಮಗ್ರಿಗಳು, ಜನರೇಟರ್‌ಗಳು ಎಲ್ಲವನ್ನೂ ಭಾರತ ತ್ವರಿತವಾಗಿ ಒದಗಿಸುತ್ತಿದೆ.





