ಉತ್ತರ ಪ್ರದೇಶದ: ಘಾಝಿಯಾಬಾದ್‌ನಲ್ಲಿ ಮಹಿಳಾ ಪೊಲೀಸರ ತಂಡವು ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಎನ್‌ಕೌಂಟರ್ ನಡೆಸಿ, ಕುಖ್ಯಾತ ರೌಡಿಯೊಬ್ಬನನ್ನು ಬಂಧಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ಶೂನ್ಯ ಸಹಿಷ್ಣುತೆ ನೀತಿಯಡಿ, ಈ ಘಟನೆಯು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮಹಿಳಾ ಪೊಲೀಸರ ಶಕ್ತಿಯನ್ನು ತೋರಿಸಿದೆ.
ಘಟನೆಯ ವಿವರ
ಸೆಪ್ಟೆಂಬರ್ 23 ರಂದು ಘಾಝಿಯಾಬಾದ್‌ನ ಚೆಕ್‌ಪಾಯಿಂಟ್‌ನಲ್ಲಿ ಮಹಿಳಾ ಪೊಲೀಸರ ತಂಡ ಕಾರ್ಯಾಚರಣೆಯಲ್ಲಿತ್ತು. ಈ ವೇಳೆ, ಕುಖ್ಯಾತ ರೌಡಿ ಜಿತೇಂದ್ರ ಸ್ಕೂಟರ್‌ನಲ್ಲಿ ಆ ದಾರಿಯಾಗಿ ಸಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ತಕ್ಷಣ ಮಹಿಳಾ ಪೊಲೀಸರು, ಜಿತೇಂದ್ರನನ್ನು ಬಂಧಿಸಲು ಯೋಜನೆ ರೂಪಿಸಿದರು. ಚೆಕ್‌ಪಾಯಿಂಟ್‌ನಲ್ಲಿ ಜಿತೇಂದ್ರನ ಸ್ಕೂಟರ್ ಅನ್ನು ನಿಲ್ಲಿಸಲು ಸೂಚಿಸಿದಾಗ, ಅವನು ತಪ್ಪಿಸಿಕೊಳ್ಳಲು ಯತ್ನಿಸಿದನು. ಆದರೆ, ಬ್ಯಾರಿಕೇಡ್‌ಗೆ ಸ್ಕೂಟರ್ ಡಿಕ್ಕಿ ಹೊಡೆದು, ಜಿತೇಂದ್ರ ನೆಲಕ್ಕೆ ಬಿದ್ದನು.
ಪೊಲೀಸರು ಜಿತೇಂದ್ರನಿಗೆ ಶರಣಾಗಲು ಸೂಚಿಸಿದರು. ಆದರೆ, ಗಾಯಗೊಂಡಂತೆ ನಟಿಸಿದ ಜಿತೇಂದ್ರ, ರಸ್ತೆಯಲ್ಲೇ ಮಲಗಿ, ಪೊಲೀಸರನ್ನು ಗೊಂದಲಕ್ಕೀಡು ಮಾಡಿದನು. ಕೆಲವೇ ಕ್ಷಣಗಳಲ್ಲಿ, ಅವನು ರಿವಾಲ್ವರ್ ತೆಗೆದು ಪೊಲೀಸರ ಮೇಲೆ ಗುಂಡಿನ ದಾಳಿ ಆರಂಭಿಸಿದನು. ಆದರೆ, ಎಲ್ಲಾ ಸವಾಲುಗಳಿಗೆ ಸಿದ್ಧರಾಗಿದ್ದ ಮಹಿಳಾ ಪೊಲೀಸರು ತಕ್ಷಣ ಪ್ರತಿದಾಳಿಗೆ ಮುಂದಾದರು. ಜಿತೇಂದ್ರನ ಎರಡೂ ಕಾಲುಗಳಿಗೆ ಗುಂಡಿನ ದಾಳಿ ನಡೆಸಿ, ಅವನನ್ನು ಕುಸಿಯುವಂತೆ ಮಾಡಿದರು. ನಂತರ, ಅವನ ರಿವಾಲ್ವರ್ ಕಸಿದುಕೊಂಡು ಬಂಧಿಸಿದರು. ಜಿತೇಂದ್ರನ ಬಳಿಯಿಂದ ಪಿಸ್ತೂಲ್, ಟ್ಯಾಬ್, ಮತ್ತು ಸ್ಮಾರ್ಟ್‌ಫೋನ್ ವಶಪಡಿಸಿಕೊಳ್ಳಲಾಯಿತು.
ಯೋಗಿ ಸರ್ಕಾರದ ಕಠಿಣ ನೀತಿ
ಯೋಗಿ ಆದಿತ್ಯನಾಥ್ ಸರ್ಕಾರವು ರಾಜ್ಯದಲ್ಲಿ ಗ್ಯಾಂಗ್‌ಸ್ಟರ್‌ಗಳು, ರೌಡಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಶೂನ್ಯ ಸಹಿಷ್ಣುತೆಯ ನೀತಿಯಡಿ, ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್‌ಗಳ ಮೂಲಕ ಕಾನೂನು ಉಲ್ಲಂಘಕರನ್ನು ನಿಯಂತ್ರಿಸುತ್ತಿದ್ದಾರೆ. ಈ ಎನ್‌ಕೌಂಟರ್ ದೇಶದ ಇತಿಹಾಸದಲ್ಲಿ ಮಹಿಳಾ ಪೊಲೀಸರಿಂದ ನಡೆದ ಮೊದಲ ಎನ್‌ಕೌಂಟರ್ ಆಗಿದೆ. ಈ ಕಾರ್ಯಾಚರಣೆಯ ಮೂಲಕ, ಉತ್ತರ ಪ್ರದೇಶದ ಮಹಿಳಾ ಪೊಲೀಸರು ದೇಶದಾದ್ಯಂತ ಮಾದರಿಯಾಗಿದ್ದಾರೆ.