ಸೋಶಿಯಲ್ ಮೀಡಿಯಾದಲ್ಲಿ #I Love Muhammad ಟ್ಯಾಗ್ ಕಳೆದ ಕೆಲವು ದಿನಗಳಿಂದ ಭಾರೀ ವೈರಲ್ ಆಗಿದೆ. ವಾಟ್ಸಾಪ್, ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ಟ್ಯಾಗ್‌ನೊಂದಿಗೆ ಫೋಟೋಗಳು ಮತ್ತು ವಿಡಿಯೋಗಳು ಸ್ಟೇಟಸ್‌ನಲ್ಲಿ ಕಾಣಿಸಿಕೊಳ್ಳುತ್ತಿವೆ. ಈ ಟ್ರೆಂಡ್‌ನ ಮೂಲವನ್ನು ಪತ್ತೆ ಹಚ್ಚಿದರೆ, ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಗೆ ಇದು ಸಂಬಂಧಿಸಿದೆ. ಈ ಲೇಖನದಲ್ಲಿ ಈ ಟ್ರೆಂಡ್‌ನ ಹಿಂದಿನ ಕಾರಣಗಳನ್ನು ಮತ್ತು ಅದರ ಸತ್ಯಾಸತ್ಯತೆಯನ್ನು ತಿಳಿಯಿರಿ.
ಸೆಪ್ಟೆಂಬರ್ 4ರಂದು ಉತ್ತರ ಪ್ರದೇಶದ ಕಾನ್ಪುರದ ರಾವತ್‌ಪುರದಲ್ಲಿ ಈದ್ ಮಿಲಾದ್ ಸಂದರ್ಭದಲ್ಲಿ ಆಯೋಜಿತವಾದ ಮೆರವಣಿಗೆಯೇ ಈ ಟ್ರೆಂಡ್‌ಗೆ ಆರಂಭವಾಯಿತು. ಈ ಮೆರವಣಿಗೆಯಲ್ಲಿ ಕೆಲವರು “ಐ ಲವ್ ಮಹಮ್ಮದ್” ಎಂಬ ಬ್ಯಾನರ್‌ಗಳನ್ನು ಪ್ರದರ್ಶಿಸಿದ್ದರು, ಇನ್ನೂ ಕೆಲವರು ಇದೇ ಶೀರ್ಷಿಕೆಯ ಫಲಕಗಳನ್ನು ಹಿಡಿದಿದ್ದರು. ಈ ಕ್ರಿಯೆಯನ್ನು ಕೆಲವು ಹಿಂದೂ ಸಂಘಟನೆಗಳು ಖಂಡಿಸಿದವು.
ಪೊಲೀಸ್ ಮಧ್ಯಪ್ರವೇಶ ಮತ್ತು ಪ್ರತಿಭಟನೆ
ಪರಿಸ್ಥಿತಿಯನ್ನು ಶಾಂತಗೊಳಿಸಲು ಪೊಲೀಸರು ಮಧ್ಯಪ್ರವೇಶಿಸಿದರು. ಯಾವುದೇ ಎಫ್‌ಐಆರ್ ದಾಖಲಾಗದಿದ್ದರೂ, ಬ್ಯಾನರ್‌ಗಳನ್ನು ತೆರವುಗೊಳಿಸಲಾಯಿತು. ಆದರೆ, ಈ ಘಟನೆಗೆ ಸಂಬಂಧಿಸಿದಂತೆ 24 ಜನರ ವಿರುದ್ಧ ಪ್ರಕರಣ ದಾಖಲಾಯಿತು. ಕಾನ್ಪುರ ಘಟನೆಯ ನಂತರ, ಉನ್ನಾವೋದಲ್ಲಿ ಕೆಲವು ಯುವಕರು “ಐ ಲವ್ ಮುಹಮ್ಮದ್” ಬ್ಯಾನರ್‌ಗಳೊಂದಿಗೆ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಲವೆಡೆ ಕಲ್ಲು ತೂರಾಟವೂ ನಡೆಯಿತು, ಐವರನ್ನು ಬಂಧಿಸಲಾಯಿತು. ಮಹಾರಾಜಗಂಜ್‌ನಲ್ಲಿ ಪೊಲೀಸರು ಮೆರವಣಿಗೆಯನ್ನು ತಡೆದು 64 ಜನರ ವಿರುದ್ಧ ಪ್ರಕರಣ ದಾಖಲಿಸಿ, ವಾಹನಗಳನ್ನು ವಶಕ್ಕೆ ತೆಗೆದುಕೊಂಡರು. ಕೌಶಾಂಬಿಯಲ್ಲಿ ಉಗ್ರ ಘೋಷಣೆಗಳ ವಿಡಿಯೋ ವೈರಲ್ ಆದ ನಂತರ, ಡಜನ್‌ಗಟ್ಟಲೆ ಜನರನ್ನು ಬಂಧಿಸಲಾಯಿತು.
ಲಕ್ನೋದಿಂದ ಹೈದರಾಬಾದ್‌ವರೆಗೆ: ಪ್ರತಿಭಟನೆಯ ರಾಷ್ಟ್ರೀಯ ವಿಸ್ತರಣೆ
ಈ ಘಟನೆಗಳನ್ನು ಖಂಡಿಸಿ, ಲಕ್ನೋದಲ್ಲಿ ಮಹಿಳೆಯರು ವಿಧಾನಸಭೆಯ ಮುಂಭಾಗದಲ್ಲಿ ಶಾಂತಿಯುತವಾಗಿ “ಐ ಲವ್ ಮಹಮ್ಮದ್” ಘೋಷಣೆ ಕೂಗಿದರು. ಸಾಮಾಜಿಕ ಕಾರ್ಯಕರ್ತೆ ಸುಮಯಾ ರಾಣಾ, “ಐ ಲವ್ ಮುಹಮ್ಮದ್ ಎನ್ನುವುದು ಸಾಂವಿಧಾನಿಕ ಹಕ್ಕು, ಇದಕ್ಕೆ ಪ್ರಕರಣ ದಾಖಲಿಸುವುದು ತಪ್ಪು” ಎಂದು ಪ್ರತಿಕ್ರಿಯಿಸಿದರು. ಈ ಘಟನೆಯ ನಂತರ, ಹೈದರಾಬಾದ್, ನಾಗ್ಪುರ ಮತ್ತು ಉತ್ತರಾಖಂಡದ ಕಾಶಿಪುರದಲ್ಲಿ ಪ್ರತಿಭಟನೆಗಳು ನಡೆದವು. ಕಾಶಿಪುರದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಸಂಘರ್ಷದಿಂದ ಕಲ್ಲು ತೂರಾಟ ನಡೆದು, ಹಲವು ವಾಹನಗಳು ಜಖಂಗೊಂಡವು.
ಸಮಾಜವಾದಿ ಪಕ್ಷವು “ನಾನು ರಾಮನನ್ನು ಪ್ರೀತಿಸುವಂತೆ, ಅವರು ಮಹಮ್ಮದ್‌ರನ್ನು ಪ್ರೀತಿಸುವುದು ಸ್ವಾತಂತ್ರ್ಯ” ಎಂದು ಬೆಂಬಲಿಸಿತ್ತು. ಬಿಜೆಪಿಯು ಕಾನೂನು ಉಲ್ಲಂಘನೆಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು. ಜಮಾತ್ ರಝಾ-ಎ-ಮುಸ್ತಫಾ ಮತ್ತು ವಿಶ್ವ ಸೂಫಿ ವೇದಿಕೆಯಂತಹ ಧಾರ್ಮಿಕ ಸಂಘಟನೆಗಳು ಹಿಂಸಾಚಾರವನ್ನು ಖಂಡಿಸಿ, ಸಾಮರಸ್ಯಕ್ಕೆ ಕರೆ ನೀಡಿದವು. ಎಐಎಂಐಎಂನ ಅಸಾದುದ್ದೀನ್ ಓವೈಸಿ, “ಐ ಲವ್ ಮಹಮ್ಮದ್ ಎನ್ನುವುದು ಧಾರ್ಮಿಕ ಸ್ವಾತಂತ್ರ್ಯ, ಇದು ಅಪರಾಧವಲ್ಲ” ಎಂದು ಎಕ್ಸ್‌ನಲ್ಲಿ ಬರೆದು, ಕಾನ್ಪುರ ಪೊಲೀಸರ ಖಾತೆಗೆ ಟ್ಯಾಗ್ ಮಾಡಿದರು.