ಹೈದರಾಬಾದ್: ಕೆಲವೊಮ್ಮೆ ಮನಸ್ಸಿನಲ್ಲಿ ಅಡಗಿಕೊಂಡಿರುವ ಭಯ, ಜೀವನದ ಮೇಲೆ ಬೃಹತ್ ಪ್ರಭಾವ ಬೀರುತ್ತದೆ. ಬಾಲ್ಯದಲ್ಲಾದ ಆಘಾತ, ಅಥವಾ ಸಣ್ಣದೊಂದು ಘಟನೆ ಕೆಲವರಲ್ಲಿ ಅದು ಅತಿಯಾದ ಭೀತಿಯ ರೂಪ ತಾಳುತ್ತದೆ. ಹೀಗಿರುವಾಗ ತೆಲಂಗಾಣದ ಮಹಿಳೆಯೊಬ್ಬಳು ಇರುವೆಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಅಮೀನ್‌ಪುರದಲ್ಲಿ ಈ ಘಟನೆ ನಡೆದಿದೆ. ಮನೀಷಾ (25) ಮೃತ ದುರ್ದೈವಿ.
ಮನೀಷಾ ಅವರು ಕೆಲವು ತಿಂಗಳಿನಿಂದ ‘ಮೈರ್ಮೆಕೊಫೋಬಿಯಾ’ (Myrmecophobia) ಎನ್ನುವ ಅಸಾಧ್ಯ ಭಯದ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಇರುವೆ ಕಂಡರೆ ಆಕೆಯ ಹೃದಯ ಬಡಿತ ಹೆಚ್ಚಾಗಿ, ಉಸಿರುಗಟ್ಟಿ, ಕೈಕಾಲು ನಡುಗುತ್ತಿತ್ತು. ಕುಟುಂಬಸ್ಥರು ಆಕೆಯನ್ನು ಹೈದರಾಬಾದ್‌ನ ಹಲವು ಆಸ್ಪತ್ರೆಗಳಿಗೆ ಕರೆದೊಯ್ದಿದ್ದರು. ಮನೋವೈದ್ಯರ ಕೌನ್ಸೆಲಿಂಗ್, ಔಷಧಗಳು, ಧ್ಯಾನ ತರಗತಿಗಳು ಎಲ್ಲವೂ ಪ್ರಯತ್ನಿಸಿದ್ದರು. ಆದರೆ ಭಯದ ದೆವ್ವ ಆಕೆಯನ್ನು ಬಿಡಲಿಲ್ಲ.
ಮನೆ ಸ್ವಚ್ಛಗೊಳಿಸುವ ನೆಪದಲ್ಲಿ ಮನೀಷಾ ತಮ್ಮ 3 ವರ್ಷದ ಮಗಳು ಅನ್ವಿಯನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದರು. ಸಂಜೆ ವೇಳೆ ಪತಿ ಶ್ರೀಕಾಂತ್ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಗಮನಕ್ಕೆ ಬಂದಿದೆ. ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದಾಗ, ಮನೀಷಾ ಸೀರೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಘಟನಾ ಸ್ಥಳವನ್ನು ಪರಿಶೀಲಿಸಿದ ಪೊಲೀಸರು, ಅವರ ಪಕ್ಕದಲ್ಲಿ ಬಿದ್ದಿದ್ದ ಮರಣಪತ್ರವನ್ನೂ ವಶಪಡಿಸಿಕೊಂಡಿದ್ದಾರೆ. ಆ ಪತ್ರದಲ್ಲಿ ಮನೀಷಾ, ಶ್ರೀ.. ಕ್ಷಮಿಸಿ… ನನಗೆ ಇರುವೆಗಳ ಜೊತೆ ಬದುಕಲು ಸಾಧ್ಯವಿಲ್ಲ. ಅನ್ವಿಯನ್ನು ನೋಡಿಕೊಳ್ಳಿ ಎಂದು ಬರೆದಿದ್ದರು.





