ಹೈದರಾಬಾದ್‌ನ ಪಶಮಿಲಾರಂ ಎಸ್ಟೇಟ್‌ನ ಸಿಗಾಚಿ ಫಾರ್ಮಾ ಕಂಪನಿಯಲ್ಲಿ ರಿಯಾಕ್ಟರ್ ಸ್ಫೋಟ ಸಂಭವಿಸಿದ್ದು, ಈ ದುರಂತದಲ್ಲಿ 8 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸುಮಾರು 36 ಕಾರ್ಮಿಕರು ಗಾಯಗೊಂಡಿದ್ದು, 20 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಸ್ಫೋಟದ ತೀವ್ರತೆಯಿಂದ ಉತ್ಪಾದನಾ ವಿಭಾಗದ ಕಟ್ಟಡ ಕುಸಿದು, ಮತ್ತೊಂದು ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿವೆ. ಸ್ಫೋಟದ ಸಂದರ್ಭದ ಸ್ಥಳದಲ್ಲಿ 66 ಕಾರ್ಮಿಕರು ಕೆಲಸದಲ್ಲಿದ್ದರು.
ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಗಾಗಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಆರೋಗ್ಯ ಸಚಿವ ದಾಮೋದರ್ ರಾಜನರಸಿಂಹ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದರು. ಗಾಯಗೊಂಡ ಕಾರ್ಮಿಕರನ್ನು ಚಂದಾನಗರ ಮತ್ತು ಇಸ್ನಾಪುರದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಚಿಕಿತ್ಸೆಯ ವೇಳೆ ಮೂವರು ಮೃತಪಟ್ಟಿದ್ದಾರೆ. ಕೆಲವು ಕಾರ್ಮಿಕರು ಇನ್ನೂ ಸ್ಥಾವರದೊಳಗೆ ಸಿಲುಕಿರುವ ಶಂಕೆಯಿದೆ.
ಹನ್ನೊಂದು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿವೆ. ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಪರಿಶೀಲನೆ ನಡೆಯುತ್ತಿದೆ. ಸಂಗರೆಡ್ಡಿ ಜಿಲ್ಲಾಧಿಕಾರಿ ಪ್ರವೀಣ್ಯ ಮತ್ತು ಎಸ್ಪಿ ಪರಿತೋಷ್ ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ಕಾರ್ಯಕ್ಕೆ ಸಲಹೆ ನೀಡಿದ್ದಾರೆ. ಸ್ಥಾವರದಿಂದ ಕೆಟ್ಟ ವಾಸನೆ ಹೊರಹೊಮ್ಮುತ್ತಿದ್ದು, ಸುತ್ತಮುತ್ತಲಿನ ಜನರಿಗೆ ತೊಂದರೆಯಾಗಿದೆ.





