ನವದೆಹಲಿ: ಭಾರತದ 77ನೇ ಗಣರಾಜ್ಯೋತ್ಸವವು ಇತಿಹಾಸ ಮತ್ತು ಆಧುನಿಕತೆಯ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಎಲ್ಲರ ಗಮನ ಸೆಳೆದಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರ ಭವ್ಯ ಸಾರೋಟು ಮೆರವಣಿಗೆ. ಭದ್ರತಾ ಕಾರಣಗಳಿಂದಾಗಿ ದಶಕಗಳ ಕಾಲ ಸ್ಥಗಿತಗೊಂಡಿದ್ದ ಈ ಪದ್ಧತಿಯು 40 ವರ್ಷಗಳ ನಂತರ ಮತ್ತೆ ಮರಳಿರುವುದು ವಿಶೇಷ.
ಈ ಸಾರೋಟು ಕೇವಲ ಒಂದು ವಾಹನವಲ್ಲ, ಇದು ಭಾರತದ ರಾಜತಾಂತ್ರಿಕ ವಿಜಯದ ಸಂಕೇತವೂ ಹೌದು. ಬ್ರಿಟಿಷರ ಆಳ್ವಿಕೆಯಲ್ಲಿ ವೈಸ್‌ರಾಯ್‌ಗಳು ಬಳಸುತ್ತಿದ್ದ ಈ ಆರು ಕುದುರೆಗಳ ಸಾರೋಟಿನ ಮೇಲೆ ಸ್ವಾತಂತ್ರ್ಯಾನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹಗ್ಗಜಗ್ಗಾಟ ನಡೆದಿತ್ತು.
ದೇಶ ವಿಭಜನೆಯ ಸಂದರ್ಭದಲ್ಲಿ ಆಸ್ತಿ ಹಂಚಿಕೆಯಾಗುವಾಗ ಈ ಐಷಾರಾಮಿ ಸಾರೋಟು ತಮಗೇ ಬೇಕೆಂದು ಪಾಕಿಸ್ತಾನ ಪಟ್ಟು ಹಿಡಿದಿತ್ತು. ಆಗ ಭಾರತ ಮತ್ತು ಪಾಕಿಸ್ತಾನದ ಪ್ರತಿನಿಧಿಗಳ ನಡುವೆ ಕೇವಲ ಒಂದು ನಾಣ್ಯದ ಟಾಸ್ ಹಾಕುವ ಮೂಲಕ ನಿರ್ಧಾರ ಮಾಡಲಾಯಿತು. ಈ ಲಕ್ಕಿ ಟಾಸ್‌ನಲ್ಲಿ ಭಾರತ ಗೆದ್ದಿದ್ದರಿಂದ, ಈ ಐತಿಹಾಸಿಕ ಸಾರೋಟು ಭಾರತದ ರಾಷ್ಟ್ರಪತಿ ಭವನದಲ್ಲಿ ಉಳಿಯಿತು.
ಬಳಕೆ ಸ್ಥಗಿತಗೊಂಡಿದ್ದು ಯಾಕೆ ?
1984ರವರೆಗೆ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ರಾಷ್ಟ್ರಪತಿಗಳು ಈ ಸಾರೋಟನ್ನು ಬಳಸುತ್ತಿದ್ದರು. ಆದರೆ, ಅದೇ ವರ್ಷ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯಾದ ನಂತರ ಗಣ್ಯರ ಭದ್ರತೆಯ ದೃಷ್ಟಿಯಿಂದ ಸಾರೋಟು ಬಳಕೆಯನ್ನು ಸ್ಥಗಿತಗೊಳಿಸಿ, ಬುಲೆಟ್ ಪ್ರೂಫ್ ಕಾರುಗಳ ಬಳಕೆಯನ್ನು ಕಡ್ಡಾಯಗೊಳಿಸಲಾಯಿತು. ಅಂದಿನಿಂದ ಸುಮಾರು 30 ವರ್ಷಗಳ ಕಾಲ ಈ ಸಾರೋಟು ರಾಷ್ಟ್ರಪತಿ ಭವನದ ಗ್ಯಾರೇಜ್‌ನಲ್ಲೇ ಇತ್ತು.
2014ರಲ್ಲಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಬೀಟಿಂಗ್ ದಿ ರಿಟ್ರೀಟ್ ಕಾರ್ಯಕ್ರಮಕ್ಕೆ ಈ ಸಾರೋಟಿನಲ್ಲಿ ಬರುವ ಮೂಲಕ ಪುನಃ ಬಳಕೆಗೆ ತಂದರು. ಆದರೆ ಗಣರಾಜ್ಯೋತ್ಸವದ ಮುಖ್ಯ ಮೆರವಣಿಗೆಯಲ್ಲಿ 40 ವರ್ಷಗಳ ನಂತರ ಮೊದಲ ಬಾರಿಗೆ ರಾಷ್ಟ್ರಪತಿಗಳು ಮತ್ತು ವಿದೇಶಿ ಅತಿಥಿಗಳು ಇದರಲ್ಲಿ ಕಾಣಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ವಿದೇಶಿ ಗಣ್ಯರು ಭಾರತಕ್ಕೆ ಬಂದಾಗ ಅತ್ಯಂತ ಬಿಗಿ ಭದ್ರತೆಯ ಕಾರುಗಳಲ್ಲಿ ಸಾಗುತ್ತಾರೆ. ಆದರೆ ಈ ಬಾರಿ ವಿದೇಶಿ ಅತಿಥಿಗಳು ಶಿಷ್ಟಾಚಾರವನ್ನು ಮೀರಿ ಭಾರತದ ರಾಷ್ಟ್ರಪತಿಯವರೊಂದಿಗೆ ಸಾರೋಟಿನಲ್ಲಿ ಕುಳಿತು ಕರ್ತವ್ಯ ಪಥಕ್ಕೆ ಬಂದಿದ್ದು, ಉಭಯ ದೇಶಗಳ ನಡುವಿನ ಆಪ್ತ ಸಂಬಂಧವನ್ನು ತೋರಿಸಿದೆ. ಕುದುರೆ ಸವಾರಿಗಳ ಬೆಂಗಾವಲು ಪಡೆಯೊಂದಿಗೆ ಸಾರೋಟು ಸಾಗಿದ ದೃಶ್ಯ ಬ್ರಿಟಿಷರ ಕಾಲದ ವೈಭವವನ್ನು ನೆನಪಿಸುವಂತಿತ್ತು.
ಈ ಬದಲಾವಣೆಯು ಭಾರತವು ತನ್ನ ಹಳೆಯ ಸಾಂಪ್ರದಾಯಿಕ ವೈಭವವನ್ನು ಮರಳಿ ಪಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಬಣ್ಣ ಬಣ್ಣದ ವಸ್ತ್ರಧಾರಿಗಳಾದ ಕುದುರೆ ಸವಾರರು ಮತ್ತು ರಾಜಮನೆತನದ ಶೈಲಿಯ ಈ ಸಾರೋಟು ಮೆರವಣಿಗೆಯು 77ನೇ ಗಣರಾಜ್ಯೋತ್ಸವಕ್ಕೆ ಹೊಸ ಕಳೆಯನ್ನು ನೀಡಿತು.





