ಅಹಮದಾಬಾದ್: ಪ್ರೀತಿಯಿಂದ ಸಾಕಿದ್ದ ನಾಯಿಯ ಉಗುರು ತಗಲಿದ್ದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಒಬ್ಬ ಪೊಲೀಸ್ ಅಧಿಕಾರಿ ಪ್ರಾಣಕಳೆದುಕೊಂಡ ದುರಂತ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. ಸಿಟಿ ಕಂಟ್ರೋಲ್ ರೂಮ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಇನ್ಸ್‌ಪೆಕ್ಟರ್ ವನರಾಜ್ ಮಂಜರಿಯಾ ಅವರು ತಮ್ಮದೇ ಆದ ಜರ್ಮನ್ ಶೆಫರ್ಡ್ ನಾಯಿಯ ಉಗುರು ತಗಲಿದ್ದಕ್ಕೆ ರೇಬಿಸ್ ರೋಗ ಬಂದು ಮೃತಪಟ್ಟಿದ್ದಾರೆ.
ಘಟನೆಯ ಹಿನ್ನೆಲೆ
ವನರಾಜ್ ಮಂಜರಿಯಾ ಅವರು ತಮ್ಮ ಜರ್ಮನ್ ಶೆಫರ್ಡ್ ನಾಯಿಯನ್ನು ಪ್ರೀತಿಯಿಂದ ಸಾಕುತ್ತಿದ್ದರು. ದಿನನಿತ್ಯವೂ ಅದರೊಂದಿಗೆ ವಾಕಿಂಗ್ ಕರೆದುಕೊಂಡು ಹೋಗುವುದು ಅವರ ದಿನಚರಿಯಾಗಿತ್ತು. ಒಂದು ದಿನ, ಈ ರೂಟೀನ್ ವಾಕಿಂಗ್ ಸಮಯದಲ್ಲಿ, ನಾಯಿಯ ಉಗುರು ಅಕಸ್ಮಾತ್ ಅವರ ಕೈಗೆ ತಗಲಿದೆ. ಆದರೆ, ಉಗುರು ತಗಲಿದ್ದು ಸಾಮಾನ್ಯ ಗಾಯ ಎಂದು ಭಾವಿಸಿದ ವನರಾಜ್ ಅವರು ಆ ಗಾಯಕ್ಕೆ ಯಾವುದೇ ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳಲಿಲ್ಲ. ಗಾಯವನ್ನು ಸಾಬೂನು ಮತ್ತು ನೀರಿನಿಂದ ಸರಳವಾಗಿ ತೊಳೆದು ಬಿಟ್ಟಿದ್ದರು.
ಕೆಲವು ದಿನಗಳ ನಂತರ, ವನರಾಜ್ ಅವರ ವರ್ತನೆಯಲ್ಲಿ ಬದಲಾವಣೆ ಕಾಣಿಸಿಕೊಳ್ಳಲಾರಂಭಿಸಿತು. ರೇಬಿಸ್ ವೈರಸ್ ನರಮಂಡಲವನ್ನು ಆಕ್ರಮಿಸಿದಾಗ ಉಂಟಾಗುವ ಲಕ್ಷಣಗಳಾದ ಚಿತ್ತಭ್ರಮೆ, ಅಸಹಜ ವರ್ತನೆ, ನೀರನ್ನು ನೋಡಿ ಭಯಪಡುವುದು (ಹೈಡ್ರೋಫೋಬಿಯಾ) ಮೊದಲಾದವು ಕಾಣಿಸಿಕೊಂಡವು. ಈ ಗಂಭೀರ ಸ್ಥಿತಿಯ ನಡುವೆ ಅವರನ್ನು ಅಹಮದಾಬಾದ್‌ನ ಕೆಡಿ (KEDI) ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ರೇಬಿಸ್ ರೋಗವನ್ನು ದೃಢಪಡಿಸಿದರು. ನಂತರ ತುರ್ತು ಚಿಕಿತ್ಸೆ ನೀಡಲಾರಂಭಿಸಿದರು.
ರೇಬಿಸ್ ಲಕ್ಷಣಗಳು ಪ್ರಕಟವಾದ ನಂತರ ಚಿಕಿತ್ಸೆ ನೀಡಿದರೂ ಸಾಮಾನ್ಯವಾಗಿ ರೋಗಿಯನ್ನು ಕಾಪಾಡುವುದು ಕಷ್ಟವೇ. ದುರದೃಷ್ಟವಶಾತ್, ಇನ್ಸ್‌ಪೆಕ್ಟರ್ ವನರಾಜ್ ಮಂಜರಿಯಾ ಅವರಿಗೂ ನೀಡಿದ ಚಿಕಿತ್ಸೆಯೂ ಕೂಡ ಫಲಕಾರಿಯಾಗಲಿಲ್ಲ. ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅವರು ಪ್ರಾಣಬಿಟ್ಟಿದ್ದಾರೆ.





