ನವದೆಹಲಿ: ದೇಶದಲ್ಲಿ ಸೈಬರ್ ಭದ್ರತೆಯ ದುರ್ಬಲತೆಯನ್ನು ಬಯಲುಮಾಡುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಗುಜರಾತ್‌ನ ಒಂದು ಆಸ್ಪತ್ರೆಯ ಸ್ತ್ರೀರೋಗ ಶಾಸ್ತ್ರ ವಿಭಾಗದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳು ಅಂತಾರಾಷ್ಟ್ರೀಯ ಪೋರ್ನ್ (ನೀಲಿಚಿತ್ರ) ತಾಣಗಳಲ್ಲಿ ಬಹಿರಂಗಗೊಂಡಿವೆ. ಈ ಘಟನೆಯು ಮಹಿಳೆಯರ ಖಾಸಗಿ ಗೌಪ್ಯತೆಯನ್ನು ಗಂಭೀರವಾಗಿ ಉಲ್ಲಂಘಿಸಿದ್ದು, ಸೈಬರ್ ಅಪರಾಧಿಗಳ ಈ ಕೃತ್ಯಕ್ಕೆ ದುರ್ಬಲ ಪಾಸ್‌ವರ್ಡ್‌ಗಳೇ ಮುಖ್ಯ ಕಾರಣವೆಂದು ತನಿಖೆಯಲ್ಲಿ ತಿಳಿದುಬಂದಿದೆ.
ಹ್ಯಾಕರ್‌ಗಳು ಆಸ್ಪತ್ರೆಯ ಸಿಸಿಟಿವಿ ಸಿಸ್ಟಂನ ಪಾಸ್‌ವರ್ಡ್ ‘admin123’ ಎಂಬ ಸರಳವಾದ ಪದವನ್ನು ಕಂಡುಹಿಡಿದು, ಹ್ಯಾಕ್ ಮಾಡಲಾಗಿದೆ. ಇದರಿಂದಾಗಿ ವೈದ್ಯರು ಮಹಿಳೆಯರಿಗೆ ತಪಾಸಣೆ ಮತ್ತು ಚಿಕಿತ್ಸೆ ನೀಡುತ್ತಿರುವ ಖಾಸಗಿ ದೃಶ್ಯಗಳು ಹ್ಯಾಕರ್‌ಗಳ ಕೈಗೆ ಸಿಕ್ಕಿವೆ. ಈ ದೃಶ್ಯಗಳನ್ನು ಅವರು ವಿವಿಧ ಅಂತಾರಾಷ್ಟ್ರೀಯ ಪೋರ್ನ್ ತಾಣಗಳಲ್ಲಿ ಅಪ್‌ಲೋಡ್ ಮಾಡಿ, ಲಕ್ಷಾಂತರ ಜನರಿಗೆ ಲಭ್ಯವಾಗುವಂತೆ ಮಾಡಿದ್ದಾರೆ. ಈ ಕೃತ್ಯ 2024ರ ಜನವರಿಯಿಂದ ಡಿಸೆಂಬರ್ ವರೆಗೆ ಸುಮಾರು 9 ತಿಂಗಳುಗಳ ಕಾಲ ನಡೆದಿದ್ದು, ಈ ಅವಧಿಯಲ್ಲಿ 80 ಸಿಸಿಟಿವಿ ಕ್ಯಾಮೆರಾಗಳಿಂದ ಸುಮಾರು 50,000ಕ್ಕೂ ಹೆಚ್ಚು ದೃಶ್ಯಗಳನ್ನು ಕದ್ದಿದ್ದಾರೆ.
ಕೇವಲ ಗುಜರಾತ್‌ನ ಆಸ್ಪತ್ರೆಗೆ ಮಾತ್ರ ಸೀಮಿತವಲ್ಲ ಈ ದಾಳಿ. ದೆಹಲಿ, ಪುಣೆ, ನಾಸಿಕ್, ಮುಂಬೈ, ಸೂರತ್, ಅಹಮದಾಬಾದ್ ಸೇರಿದಂತೆ ದೇಶದ 20 ರಾಜ್ಯಗಳಲ್ಲಿ ಆಸ್ಪತ್ರೆಗಳು, ಶಾಲೆಗಳು, ಕಚೇರಿಗಳು, ಕಾರ್ಖಾನೆಗಳು ಮತ್ತು ಕೆಲವು ಮನೆಗಳ ಸಿಸಿಟಿವಿ ದೃಶ್ಯಗಳು ಹ್ಯಾಕರ್‌ಗಳ ಕೈಗೆ ಸಿಕ್ಕಿವೆ. ಈ ದೃಶ್ಯಗಳನ್ನು ಯೂಟ್ಯೂಬ್ ಮತ್ತು ಟೆಲಿಗ್ರಾಮ್ ಚಾನಲ್‌ಗಳಲ್ಲಿಯೂ ಅಪ್‌ಲೋಡ್ ಮಾಡಲಾಗಿದೆ. ಇದರಿಂದ ಮಹಿಳೆಯರ ಗೌಪ್ಯತೆಯ ಜೊತೆಗೆ ಮಕ್ಕಳು, ಉದ್ಯೋಗಿಗಳು ಮತ್ತು ಸಾಮಾನ್ಯ ನಾಗರಿಕರ ಖಾಸಗಿ ಜೀವನಕ್ಕೂ ಧಕ್ಕೆ ಬಂದಿದೆ.
ತಜ್ಞರು ಹೇಳುವ ಪ್ರಕಾರ, ದುರ್ಬಲ ಪಾಸ್‌ವರ್ಡ್‌ಗಳು ಸೈಬರ್ ದಾಳಿಗಳ ಮುಖ್ಯ ಬಾಗಿಲಾಗಿವೆ. ‘admin123’ ನಂತಹ ಸರಳ ಪಾಸ್‌ವರ್ಡ್‌ಗಳನ್ನು ಬಳಸುವುದು ಹ್ಯಾಕರ್‌ಗಳಿಗೆ ಸುಲಭವಾಗಿ ವ್ಯವಸ್ಥೆಯನ್ನು ನುಗ್ಗಲು ಅವಕಾಶ ನೀಡುತ್ತದೆ. ಆಸ್ಪತ್ರೆಗಳಂತಹ ಸಂವೇದನಾಶೀಲ ಸ್ಥಳಗಳಲ್ಲಿ ಸಿಸಿಟಿವಿ ಸಿಸ್ಟಂಗಳನ್ನು ಆಧುನಿಕ ಭದ್ರತಾ ವ್ಯವಸ್ಥೆಗಳೊಂದಿಗೆ ಅಪ್‌ಡೇಟ್ ಮಾಡದಿರುವುದು ಈ ಘಟನೆಗೆ ಕಾರಣವಾಗಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ತಮ್ಮ ಡಿಜಿಟಲ್ ಭದ್ರತೆಯನ್ನು ಬಲಪಡಿಸಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಐಟಿ ಕಾಯ್ದೆಯಡಿ ಹ್ಯಾಕಿಂಗ್, ಗೌಪ್ಯತೆ ಉಲ್ಲಂಘನೆಗೆ ಕಠಿಣ ಶಿಕ್ಷೆಯಿದ್ದರೂ, ಅಪರಾಧಿಗಳನ್ನು ಪತ್ತೆಹಚ್ಚುವುದು ಸವಾಲಾಗಿದೆ. ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದು, ಹ್ಯಾಕರ್‌ಗಳನ್ನು ಬಂಧಿಸಲು ಅಂತಾರಾಷ್ಟ್ರೀಯ ಸಹಕಾರ ಕೋರಿದ್ದಾರೆ. ಆದರೆ, ಸೋರಿಕೆಯಾದ ದೃಶ್ಯಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದು ಅಸಾಧ್ಯವೆನಿಸಿದೆ.





