ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದ ಒಂದು ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿದೆ. ಊಟದ ಸಮಯದಲ್ಲಿ ಮೊಟ್ಟೆ ಕರಿ ಮಾಡುವ ವಿಚಾರಕ್ಕಾಗಿ ಪತಿ ಪತ್ನಿ ನಡುವೆ ಜಗಳವಾಗಿದ್ದು, ಪತ್ನಿ ಗಂಡನ ನಾಲಿಗೆಯನ್ನು ಕಚ್ಚಿದ್ದಾಳೆ. ಇದರಿಂದ ನಾಲಿಗೆ ಸಂಪೂರ್ಣ ತುಂಡಾಗಿದ್ದು, ಇದನ್ನು ಶಸ್ತ್ರಚಿಕಿತ್ಸೆ ನಡೆಸಿ ಸರಿಪಡಿಸುವುದು ಕೂಡ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.
ಈ ಘಟನೆ ಗಾಜಿಯಾಬಾದ್ನ ಬೇಗುಮಾಬಾದ್ ಪ್ರದೇಶದ ಸಂಜಯಪುರಿಯಲ್ಲಿ ನಡೆದಿದೆ. ವಿಪಿನ್ (32) ಮತ್ತು ಇಶಾ ಎಂಬ ದಂಪತಿ ಕಳೆದ ವರ್ಷ 2025ರ ಜೂನ್ನಲ್ಲಿ ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ಕಲಹ ಆರಂಭವಾಗಿದ್ದು, ದಿನನಿತ್ಯದ ವಿಚಾರಗಳೇ ದೊಡ್ಡ ಜಗಳಗಳಿಗೆ ಕಾರಣವಾಗುತ್ತಿದ್ದವು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವಿಪಿನ್ ಮೋದಿನಗರದ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಪೋಷಕರಾದ ರಾಮ್ ಅವತಾರ್ ಮತ್ತು ಗೀತಾ ಅವರೊಂದಿಗೆ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದ. ಸ್ಥಳಾವಕಾಶದ ಕೊರತೆಯಿಂದ ಮದುವೆಯ ನಂತರ ಮೇಲ್ಮಹಡಿಯಲ್ಲಿ ಒಂದು ಕೊಠಡಿ ನಿರ್ಮಿಸಿ, ವಿಪಿನ್ ಮತ್ತು ಇಶಾ ಅಲ್ಲೇ ವಾಸವಾಗಿದ್ದರು. ಆದರೆ, ದಂಪತಿಯ ನಡುವೆ ಹೊಂದಾಣಿಕೆ ಕೊರತೆ ಹೆಚ್ಚಾಗುತ್ತಲೇ ಹೋಗಿತ್ತು.
ವಿಪಿನ್ ತಾಯಿ ಹೇಳುವಂತೆ, ಇಶಾ ತನ್ನಿಷ್ಟದಂತೆ ಬದುಕುತ್ತಿದ್ದಳು. ಯಾರ ಮಾತಿಗೂ ಕಿವಿಗೊಡದೇ, ರಹಸ್ಯವಾಗಿ ಮದ್ಯಪಾನ ಹಾಗೂ ಸಿಗರೇಟ್ ಸೇವಿಸುತ್ತಿದ್ದಳು. ಇನ್ಸ್ಟಾಗ್ರಾಮ್ ರೀಲ್ಗಳನ್ನು ಮಾಡುವುದೇ ಆಕೆಯ ದಿನಚರಿಯಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಮನೆ ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ಆರೋಪಿಸಿದ್ದಾರೆ.
ಘಟನೆ ನಡೆದ ದಿನ, ಸೋಮವಾರ ರಾತ್ರಿ ವಿಪಿನ್ ಸುಮಾರು ರಾತ್ರಿ 8 ಗಂಟೆಗೆ ಮನೆಗೆ ಬಂದಿದ್ದಾನೆ. ಊಟದ ವೇಳೆ ಮೊಟ್ಟೆ ಕರಿ ವಿಷಯ ಪ್ರಸ್ತಾಪವಾಗಿದ್ದು, “ಪ್ರತಿದಿನ ಮೊಟ್ಟೆ ತಿನ್ನುವುದು ಸರಿಯಲ್ಲ” ಎಂದು ವಿಪಿನ್ ಹೇಳಿದ್ದೇ ಜಗಳಕ್ಕೆ ಕಾರಣವಾಗಿದೆ. ಇಶಾ ಕೋಳಿ ಮಾಂಸ ಆರ್ಡರ್ ಮಾಡಲು ಒತ್ತಾಯಿಸಿದ್ದಾಳೆ. ಇದಕ್ಕೆ ವಿಪಿನ್ ವಿರೋಧ ವ್ಯಕ್ತಪಡಿಸಿದ್ದಾನೆ.
ರಾತ್ರಿ 11 ಗಂಟೆ ವೇಳೆಗೆ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ವೇಳೆ ವಿಪಿನ್ ಆಕೆಯನ್ನು ತಡೆಯಲು ಪ್ರಯತ್ನಿಸಿದಾಗ, ಕೋಪದ ಭರದಲ್ಲಿ ಇಶಾ ಗಂಡನ ನಾಲಿಗೆಯನ್ನು ಬಲವಾಗಿ ಕಚ್ಚಿದ್ದಾಳೆ. ಇದರಿಂದ ನಾಲಿಗೆ ಸಂಪೂರ್ಣವಾಗಿ ತುಂಡಾಗಿ ಬಿದ್ದಿದ್ದು, ಭಾರೀ ರಕ್ತಸ್ರಾವವಾಗಿದೆ.
ನೋವಿನಿಂದ ಕಿರುಚುತ್ತಾ ವಿಪಿನ್ ತನ್ನ ನಾಲಿಗೆಯ ತುಂಡನ್ನು ಹಿಡಿದು ಪೋಷಕರ ಬಳಿಗೆ ಓಡಿಬಂದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನಿಗೆ ಮಾತನಾಡುವ ಶಕ್ತಿಯೇ ಇರಲಿಲ್ಲ. ತಕ್ಷಣವೇ ಆತನನ್ನು ಮೀರತ್ನ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಪರಿಶೀಲಿಸಿ, ನಾಲಿಗೆ ಸಂಪೂರ್ಣವಾಗಿ ಕತ್ತರಿಸಿದೆ ಎಂದು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಿದರೂ, ನಾಲಿಗೆಯನ್ನು ಮತ್ತೆ ಜೋಡಿಸುವುದು ಸಾಧ್ಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಘಟನೆಯ ಬಳಿಕ ವಿಪಿನ್ ಕುಟುಂಬವು ಇಶಾ ವಿರುದ್ಧ ಗಂಭೀರ ಗಾಯ ಹಾಗೂ ಕೌಟುಂಬಿಕ ಹಿಂಸೆ ಪ್ರಕರಣ ದಾಖಲಿಸಿದೆ. ಪೊಲೀಸರು ಇಶಾಳನ್ನು ಬಂಧಿಸಿದ್ದು, ಬಂಧನದ ವೇಳೆ ಆಕೆ ಮಹಿಳಾ ಪೊಲೀಸ್ ಸಿಬ್ಬಂದಿಯೊಂದಿಗೆ ಕೂಡ ವಾಗ್ವಾದ ನಡೆಸಿದ್ದಾಳೆ.
ವಿಚಾರಣೆ ವೇಳೆ ಇಶಾ, “ಅತ್ತೆ-ಮಾವ ಮತ್ತು ನೆರೆಹೊರೆಯವರು ಸೇರಿ ನನಗೆ ಹೊಡೆದರು. ಕೋಪದ ಭರದಲ್ಲಿ ನಾಲಿಗೆ ಕಚ್ಚಿದ್ದು ಸತ್ಯ” ಎಂದು ಒಪ್ಪಿಕೊಂಡಿದ್ದಾಳೆ. ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ..





