ನವದೆಹಲಿ, ಅ. 18: ದೆಹಲಿಯಲ್ಲಿ ಸಂಸದರ ವಾಸಸ್ಥಳವಾಗಿರುವ ಕಾವೇರಿ ಅಪಾರ್ಟ್‌ಮೆಂಟ್‌ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಸಂಸತ್ತು ಭವನಕ್ಕೆ ಕೇವಲ 200 ಮೀಟರ್ ದೂರದಲ್ಲಿರುವ ಕಾವೇರಿ ಅಪಾರ್ಟ್ಮೆಂಟ್ ಎಂಬ ಈ ಕಟ್ಟಡದಲ್ಲಿ ಮಧ್ಯಾಹ್ನ 1:22 ರ ಸುಮಾರಿಗೆ ಈ ಘಟನೆ ನಡೆದಿದೆ. ಈ VIP ಕಟ್ಟಡದಲ್ಲಿ ಲೋಕಸಭಾ ಮತ್ತು ರಾಜ್ಯಸಭಾ ಸಂಸದರೊಂದಿಗೆ ಹಲವು ಉನ್ನತ ಅಧಿಕಾರಿಗಳು ವಾಸಿಸುತ್ತಿದ್ದಾರೆ.
ಘಟನೆಯ ವಿವರಗಳ ಪ್ರಕಾರ, ಮಧ್ಯಾಹ್ನ 1:22 ರ ಸುಮಾರಿಗೆ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ತಿಳಿದ ಕೂಡಲೇ ದೆಹಲಿ ಅಗ್ನಿಶಾಮಕ ಇಲಾಖೆಯಿಂದ ಆರು ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಬೆಂಕಿ ತೀವ್ರವಾಗಿ ಧಗಧಗಿಸುತ್ತಿದ್ದರಿಂದ, ಸ್ಥಳೀಯರಲ್ಲಿ ಭಾರೀ ಆತಂಕವುಂಟು ಮಾಡಿತ್ತು.
ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, ಬೆಂಕಿ ಮೊದಲು ೩ನೇ ಮಹಡಿಯ ಒಂದು ಫ್ಲ್ಯಾಟ್‌ನಿಂದ ಆರಂಭವಾಗಿದ್ದು, ನಂತರ ಇತರ ಮಹಡಿಗಳಿಗೆ ಹರಡಿದೆ. ಕಾರಣ ಇನ್ನೂ ತಿಳಿದುಬಂದಿಲ್ಲ, ಸ್ಥಳಕ್ಕೆ ತಲುಪಿದ 60ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ, ತೀವ್ರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಯಾವುದೇ ಸಾವು-ನೋವುಗಳ ವರದಿಯಾಗಿಲ್ಲ.





