ಡಿಸೆಂಬರ್ 19 ಶುಕ್ರವಾರ, ಈ ದಿನಾಂಕವು ದೇಶ ಮಾತ್ರವಲ್ಲ, ವಿಶ್ವ ರಾಜಕೀಯ ವಲಯದಲ್ಲೇ ಭಾರೀ ಚರ್ಚೆಗೆ ಕಾರಣವಾಗಿದೆ. ಅಮೆರಿಕದಲ್ಲಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ರಹಸ್ಯ ದಾಖಲೆಗಳು ರಿಲೀಸ್ ಆಗಲಿರುವುದು ಇಡೀ ಜಗತ್ತಿನ ರಾಜಕೀಯ ವಲಯದಲ್ಲಿ ನಡುಕ ಹುಟ್ಟಿಸಿದೆ. ಆರ್ಥಿಕ ಹಾಗೂ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಸಂಗ್ರಹಿಸಿದ್ದ ರಹಸ್ಯ ದಾಖಲೆಗಳು ಬಹಿರಂಗವಾದರೆ, ವಿಶ್ವದ ಹಲವು ಶಕ್ತಿಶಾಲಿ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಗಣ್ಯರ ಮುಖವಾಡ ಕಳಚುವ ಸಾಧ್ಯತೆ ಇದೆ ಎಂಬ ಆತಂಕ ವ್ಯಾಪಕವಾಗಿದೆ.
ಎಪ್‌ಸ್ಟೀನ್ ಹಾಗೂ ಆತನ ಗೆಳತಿ ಗಿಸ್ಲೇನ್ ಮ್ಯಾಕ್ಸ್ವೆಲ್ ಬಳಿ ಇದ್ದ ದಾಖಲೆಗಳಲ್ಲಿ, ಅಮೆರಿಕ ಸೇರಿದಂತೆ ಹಲವು ದೇಶಗಳ ರಾಜಕೀಯ ನಾಯಕರ, ಪ್ರಭಾವಿ ವ್ಯಕ್ತಿಗಳ ಕುರಿತ ಸೂಕ್ಷ್ಮ ಮಾಹಿತಿಯಿತ್ತು ಎನ್ನಲಾಗುತ್ತಿದೆ. ಎಪ್‌ಸ್ಟೀನ್ ವಿಚಾರಣೆ ಹಾಗೂ ಮ್ಯಾಕ್ಸ್ವೆಲ್ ನ್ಯಾಯಾಂಗ ಪ್ರಕ್ರಿಯೆ ವೇಳೆ ಈ ಎಲ್ಲಾ ದಾಖಲೆಗಳನ್ನು ಎಫ್‌ಬಿಐ ಸಂಗ್ರಹಿಸಿಕೊಂಡಿದೆ. ಈಗ ಅಮೆರಿಕದ ಪಾರದರ್ಶಕತೆ ಕಾಯ್ದೆ (Transparency Law) ಅಡಿಯಲ್ಲಿ ಈ ದಾಖಲೆಗಳ ಕೆಲ ಭಾಗ ಬಹಿರಂಗವಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಭಾರೀ ಸಂಚಲನ ಮೂಡಿಸಿದೆ.
ಈ ರಹಸ್ಯ ದಾಖಲೆಗಳು ಬಹಿರಂಗವಾದರೆ ಅಮೆರಿಕ ರಾಜಕೀಯಕ್ಕೂ ದೊಡ್ಡ ಆಘಾತ ತರಬಹುದು ಎಂದು ಅಂದಾಜಿಸಲಾಗಿದೆ.. ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಹೆಸರು ಮತ್ತೆ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜೊತೆಗೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೂ ಇದರಿಂದ ಸಂಕಷ್ಟ ಎದುರಾಗಬಹುದೇ ಎಂಬ ಪ್ರಶ್ನೆ ಎದ್ದಿದೆ.
ಆದರೆ ಈ ಎಪ್‌ಸ್ಟೀನ್ ಫೈಲ್ಸ್‌ನ ಪರಿಣಾಮ ಅಮೆರಿಕಕ್ಕೆ ಮಾತ್ರ ಸೀಮಿತವಾಗಿಲ್ಲ, ಭಾರತ ರಾಜಕೀಯಕ್ಕೂ ಇದರ ಸಂಪರ್ಕ ಇರಬಹುದೇ? ಎಂಬ ಅನುಮಾನಗಳು ರಾಜಕೀಯ ವಲಯದಲ್ಲಿ ಆತಂಕ ಸೃಷ್ಟಿಸಿವೆ. ಮಾಜಿ ಸಂಸದ ಡಾ. ಸುಬ್ರಹ್ಮಣ್ಯ ಸ್ವಾಮಿ ಈ ಹಿಂದೆ ಎಪ್‌ಸ್ಟೀನ್ ಫೈಲ್ಸ್‌ಗೆ ಭಾರತದ ಲಿಂಕ್ ಇದೆ ಎಂದು ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದರು. ಕೆಲವು ಕೇಂದ್ರ ಸಚಿವರು, ಮಾಜಿ ಸಚಿವರು ಹಾಗೂ ಸಂಸದರ ಹೆಸರುಗಳು ಈ ದಾಖಲೆಗಳಲ್ಲಿ ಇರಬಹುದು ಎಂಬ ಹೇಳಿಕೆ ನೀಡಿದ್ದರು.
ಸುಬ್ರಹ್ಮಣ್ಯ ಸ್ವಾಮಿ ಅವರು, ಮೋದಿ ಸರ್ಕಾರದ ಮೇಲೆ ಅಮೆರಿಕ ಬ್ಲಾಕ್‌ಮೇಲ್ ಮಾಡುವ ಸಾಧ್ಯತೆಯ ಬಗ್ಗೆ ಮಾತನಾಡಿದ್ದರು. ಕೇಂದ್ರ ಸಚಿವ ಹರ್ದೀಪ್ ಪುರಿ ಹೆಸರನ್ನೂ ಪ್ರಸ್ತಾಪಿಸಿ, ಲೈಂಗಿಕ ಹಗರಣಗಳ ಸುಳಿಯಲ್ಲಿ ಗಣ್ಯರು ಸಿಲುಕುವ ಭೀತಿ ಇದೆ ಎಂದು ಎಚ್ಚರಿಕೆ ನೀಡಿದ್ದರು. ಈ ಹೇಳಿಕೆಗಳು ಈಗ ಮತ್ತೆ ಚರ್ಚೆಗೆ ಬಂದಿವೆ.
ಇದರ ನಡುವೆಯೇ, ಡಿಸೆಂಬರ್ 19ಕ್ಕೆ ರಾಜಕೀಯ ಭೂಕಂಪ ಎಂಬ ಮಾತುಗಳಿಗೆ ದೇಶೀಯ ರಾಜಕಾರಣಿಗಳ ಹೇಳಿಕೆಗಳು ಆತಂಕ ಮೂಡಿಸಿವೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್, ಡಿಸೆಂಬರ್ 19ರಂದು ದೊಡ್ಡ ರಾಜಕೀಯ ಬದಲಾವಣೆಗಳು ಸಂಭವಿಸಬಹುದು ಎಂದು ಹೇಳುವ ಮೂಲಕ ಕುತೂಹಲ ಹುಟ್ಟಿಸಿದ್ದಾರೆ. ಶಿವಸೇನೆ ನಾಯಕ ಸಂಜಯ್ ರಾವತ್ ಕೂಡ, ಡಿಸೆಂಬರ್ 19ಕ್ಕೆ ಪ್ರಧಾನಿ ಬದಲಾಗಬಹುದು, ಮೋದಿ ಸರ್ಕಾರ ಪತನವಾಗುವ ಸಾಧ್ಯತೆ ಇದೆ ಎಂಬ ಭವಿಷ್ಯ ನುಡಿದಿದ್ದಾರೆ.
ಚಳಿಗಾಲದ ಅಧಿವೇಶನ ಡಿಸೆಂಬರ್ 19ಕ್ಕೆ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ, ಬಿಜೆಪಿ ಹೈಕಮಾಂಡ್ ಕೆಲವು ನಾಯಕರಿಗೆ ದೆಹಲಿಯಲ್ಲೇ ಇರಲು ಸೂಚನೆ ನೀಡಿದೆ ಎಂಬ ಮಾತುಗಳೂ ಹರಿದಾಡುತ್ತಿವೆ.
ಆದರೆ ಈ ಎಲ್ಲವೂ ಕೇವಲ ವದಂತಿಗಳೇ? ಅಥವಾ ಯಾವುದೋ ಮಹಾ ರಾಜಕೀಯ ಸ್ಫೋಟಕ್ಕೆ ವೇದಿಕೆ ಸಿದ್ಧವಾಗುತ್ತಿದೆಯೇ? ಎಪ್‌ಸ್ಟೀನ್ ಫೈಲ್ಸ್ ಬಹಿರಂಗವಾದ ಬಳಿಕವೇ ಈ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಲಿದೆ. ಆದರೆ ಡಿಸೆಂಬರ್ 19 ನಿಜಕ್ಕೂ ರಾಜಕೀಯ ಕ್ರಾಂತಿಯ ದಿನವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
