ರಾಜಸ್ಥಾನ: ಜೀವನದ ಹೊಸ ಅಧ್ಯಾಯಕ್ಕೆ ನಾಂದಿ ಹಾಡಬೇಕಿದ್ದ ಇಬ್ಬರು ಸಹೋದರಿಯರು, ಮದುವೆ ಸಂಭ್ರಮದ ನಡುವೆಯೇ ಸಾವಿನ ಹಾದಿ ಹಿಡಿದಿರುವ ಘಟನೆ ರಾಜಸ್ಥಾನದ ಜೋಧ್‌ಪುರದ ಮನೈ ಗ್ರಾಮದಲ್ಲಿ ನಡೆದಿದೆ. 25 ವರ್ಷದ ಶೋಭಾ ಮತ್ತು 23 ವರ್ಷದ ವಿಮ್ಲಾ ಎಂಬ ಸಹೋದರಿಯರು ವಿವಾಹದ ದಿನವೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶನಿವಾರದಂದು ಈ ಸಹೋದರಿಯರ ವಿವಾಹ ದಿನಾಂಕ ನಿಗದಿಯಾಗಿತ್ತು. ಶುಕ್ರವಾರ ರಾತ್ರಿಯವರೆಗೂ ಮನೆಯಲ್ಲಿ ಮದುವೆಯ ಶಾಸ್ತ್ರಗಳು, ಹಾಡು-ಕುಣಿತದೊಂದಿಗೆ ಸಂಭ್ರಮ ಮನೆಮಾಡಿತ್ತು. ವಿವಾಹದ ಸಿದ್ಧತೆಗಳೆಲ್ಲವೂ ಭರದಿಂದ ಸಾಗುತ್ತಿದ್ದವು. ಮಧ್ಯರಾತ್ರಿಯ ಸುಮಾರಿಗೆ ಇಬ್ಬರೂ ಸಹೋದರಿಯರು ಮಲಗಲು ಹೋದರು. ಆದರೆ, ಬೆಳಗಿನ ಜಾವ 4 ಗಂಟೆ ಸುಮಾರಿಗೆ ಇಬ್ಬರ ಆರೋಗ್ಯವೂ ದಿಢೀರ್ ಹದಗೆಟ್ಟಿತು.
ತಕ್ಷಣವೇ ಆ ಯುವತಿಯರ ಪೋಷಕರು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಹೋದರಿಯರನ್ನು ಜೋಧ್‌ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ. ಹಸೆಮಣೆ ಏರಬೇಕಿದ್ದ ಹೆಣ್ಣುಮಕ್ಕಳು ಹೆಣವಾಗಿ ಮರಳಿದ್ದನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಕುಟುಂಬಸ್ಥರು ಮೃತದೇಹಗಳನ್ನು ಮನೆಗೆ ತಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದರು. ಈ ವೇಳೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಎಡಿಸಿಪಿ (ಪಶ್ಚಿಮ) ರೋಷನ್ ಮೀನಾ ನೇತೃತ್ವದ ಪೊಲೀಸ್ ತಂಡವು ಅಂತ್ಯಕ್ರಿಯೆಯನ್ನು ತಡೆದಿದೆ. ಸಾವಿನ ಬಗ್ಗೆ ಅನುಮಾನವಿರುವುದರಿಂದ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಸಹೋದರಿಯರು ಯಾವುದೋ ವಿಷಕಾರಿ ವಸ್ತುವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳದಲ್ಲಿ ಯಾವುದೇ ಆತ್ಮಹತ್ಯೆ ಪತ್ರ (Suicide Note) ಪತ್ತೆಯಾಗಿಲ್ಲ. ಹೀಗಾಗಿ, ಇಬ್ಬರೂ ಏಕಕಾಲಕ್ಕೆ ಇಂತಹ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ? ಮದುವೆ ಇಷ್ಟವಿರಲಿಲ್ಲವೇ ? ಅಥವಾ ಬೇರೆ ಯಾವುದಾದರೂ ಮಾನಸಿಕ ಒತ್ತಡವಿತ್ತೇ ? ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮದುವೆಯಂತಹ ಸಂದರ್ಭಗಳಲ್ಲಿ ಹೆಣ್ಣುಮಕ್ಕಳ ಮೇಲೆ ಬೀರುವ ಸಾಮಾಜಿಕ ಮತ್ತು ಮಾನಸಿಕ ಒತ್ತಡಗಳ ಬಗ್ಗೆ ಈ ಘಟನೆ ಮತ್ತೊಮ್ಮೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ.
