ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಸುರಿದ ಭಾರೀ ಮಳೆಯಿಂದ ಜೈತಾಪುರದ ಹರಿನಗರ ಪ್ರದೇಶದ ಮೋಹನ್ ಬಾಬಾ ಮಂದಿರದ ಬಳಿ ಗೋಡೆ ಕುಸಿದು ಎಂಟು ಜನರು ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 9.16ಕ್ಕೆ ಈ ದುರ್ಘಟನೆ ನಡೆದಿದ್ದು, ಮೃತರು ಶಬೀಬುಲ್ (30), ರಬೀಬುಲ್ (30), ಮುತ್ತು ಅಲಿ (45), ರುಬೀನಾ (25), ಡಾಲಿ (25), ಹಶಿಬುಲ್, ರುಕ್ಸಾನಾ (6)ಹಸೀನಾ ಎಂದು ಗುರುತಿಸಲಾಗಿದೆ. ಮೃತರಲ್ಲಿ ಹೆಚ್ಚಿನವರು ಗುಜರಾತ್ ಮೂಲದ ವ್ಯಾಪಾರಿಗಳು ಎಂದು ತಿಳಿದು ಬಂದಿದೆ.
ಗುಜರಾತ್ ಮೂಲದ ವ್ಯಾಪಾರಿಗಳು ಹರಿನಗರದ ಮೋಹನ್ ಬಾಬಾ ಮಂದಿರದ ಪಕ್ಕದಲ್ಲಿದ್ದ ತಾತ್ಕಾಲಿಕ ಟೆಂಟ್‌ಗಳಲ್ಲಿ ವಾಸವಾಗಿದ್ದರು. ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಿಗ್ಗೆ 9ಗಂಟೆವರೆಗೆ ನಿರಂತರವಾಗಿ ಸುರಿದ ಭಾರೀ ಮಳೆಯಿಂದ ಗೋಡೆ ಕುಸಿದು ಟೆಂಟ್‌ಗಳ ಮೇಲೆ ಬಿದ್ದಿದೆ. ಇದರಿಂದ ಟೆಂಟ್‌ಗಳಲ್ಲಿ ವಾಸವಿದ್ದ ಜನರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಹಾಗೂ ಅಗ್ನಿಶಾಮಕ ತಂಡ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಎಂಟು ಮಂದಿ ಸಾವನ್ನಪ್ಪಿದ್ದಾರೆ.
ಅಗ್ನಿಶಾಮಕ ಇಲಾಖೆಗೆ ಮಾಹಿತಿ ಬಂದ ತಕ್ಷಣ, ಘಟನಾ ಸ್ಥಳಕ್ಕೆ ಮೂರು ರೆಸ್ಕ್ಯೂ ವಾಹನಗಳನ್ನು ಕಳುಹಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಮತ್ತು ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ದೆಹಲಿ-ಎನ್‌ಸಿಆರ್ ಪ್ರದೇಶದ ಬಹುಭಾಗ ಶುಕ್ರವಾರ ರಾತ್ರಿಯಿಂದ ಈಗಲೂ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಅಸ್ಥವ್ಯಸ್ತವಾಗಿದೆ. ಹವಾಮಾನ ಇಲಾಖೆಯು (IMD) ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ರೆಡ್ ಅಲರ್ಟ್ ಘೋಷಿಸಿದೆ.
ಘಟನಾ ಸ್ಥಳದ ಸುತ್ತಮುತ್ತಲಿನ ನಿವಾಸಿಗಳನ್ನು ತಕ್ಷಣ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಐಶ್ವರ್ಯ ಶರ್ಮಾ ಮಾಹಿತಿ ನೀಡಿದ್ದಾರೆ.