ದೆಹಲಿ, ನವೆಂಬರ್ 10: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಭಯಾನಕ ಸ್ಫೋಟ ಸಂಭವಿಸಿ ನಗರವನ್ನೇ ನಡುಗಿಸಿದೆ. ಈ ಘಟನೆಯಲ್ಲಿ ಈಗಾಗಲೇ 10 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸ್ಫೋಟದಿಂದ ಸುತ್ತಮುತ್ತಲಿನ 10ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ ಹೊತ್ತಿ ಸುಟ್ಟುಭಸ್ಮವಾಗಿವೆ. ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಹಲವು ವ್ಯಾಪಾರಿಗಳು ಈ ದುರಂತಲ್ಲಿ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸ್ಫೋಟದ ಸ್ಥಳದಲ್ಲಿ ಈಗಾಗಲೇ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಸ್ಫೋಟದ ಸ್ಥಳದಲ್ಲಿ ಗಾಯಾಳುಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.
ಸ್ಫೋಟ ನಡೆದ ತಕ್ಷಣ ಸ್ಥಳಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಂಡ ಧಾವಿಸಿದೆ. ಬಾಂಬ್ ಡಿಸ್ಪೋಸಲ್ ಸ್ಕ್ವಾಡ್, ಅಗ್ನಿಶಾಮಕ ದಳ ಮತ್ತು ವೈದ್ಯಕೀಯ ತಂಡಗಳು ಸ್ಥಳದಲ್ಲೇ ಕಾರ್ಯನಿರ್ವಹಿಸುತ್ತಿವೆ. ಮೃತಪಟ್ಟವರಲ್ಲಿ ಹೆಚ್ಚಿನವರು ಬೀದಿ ಬದಿಯಲ್ಲಿ ಚಹಾ, ತಿಂಡಿ ಮತ್ತು ಇತರ ಸಣ್ಣ ವ್ಯಾಪಾರ ಮಾಡುತ್ತಿದ್ದವರು ಎಂದು ವರದಿಯಲ್ಲಿ ತಿಳಿಸಿದೆ.
ಸ್ಫೋಟ ನಡೆದ ತಕ್ಷಣವೇ ದೆಹಲಿ ಪೊಲೀಸರು ನಗರದಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ. ದೆಹಲಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಜನರು ಪರದಾಡುತ್ತಿದ್ದಾರೆ. ಸ್ಫೋಟದ ಆಘಾತದಿಂದ ಸುತ್ತಲಿನ ವಿದ್ಯುತ್ ದೀಪಗಳಿಗೂ ಹಾನಿಯಾಗಿದ್ದು, ಸಂಪೂರ್ಣ ಕತ್ತಲೆಯಲ್ಲಿ ಮುಳುಗಿದೆ. ಇಡೀ ದೆಹಲಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಯಿಂದ ಕೆಂಪುಕೋಟೆ ಸುತ್ತಲಿನ ಪ್ರದೇಶಗಳಲ್ಲಿ ಜನರು ಭಯಭೀತರಾಗಿದ್ದಾರೆ. ಘಟನೆ ಸ್ಥಳದ ರಸ್ತೆಗಳಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.





