ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸಂಜೆ ಭೀಕರ ಸ್ಫೋಟ ಸಂಭವಿಸಿದ್ದು, ಈ ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ಹಿನ್ನೆಲೆ ಗಂಭೀರ ತನಿಖೆ ನಡೆಯುತ್ತಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ, ಇದು ಆತ್ಮಾಹುತಿ ಭಯೋತ್ಪಾದಕ ದಾಳಿ ಇರಬಹುದೆಂಬ ಶಂಕಿಸಲಾಗಿದೆ.
ಸ್ಫೋಟಕ್ಕೂ ಮುನ್ನವೇ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 2,900 ಕೆಜಿ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದರ ಜೊತೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳೂ ಪೊಲೀಸರ ಕೈಗೆ ಸಿಕ್ಕಿದ್ದವು. ಈ ಯಶಸ್ವಿ ಕಾರ್ಯಾಚರಣೆಯಿಂದಾಗಿ ಉಗ್ರರ ದೊಡ್ಡ ಸಂಚು ತಪ್ಪಿತು. ಆದರೆ, ತಮ್ಮ ಯೋಜನೆ ಸಂಪೂರ್ಣವಾಗಿ ವಿಫಲವಾಗುವ ಭಯದಲ್ಲಿ ಉಗ್ರರು ತರಾತುರಿಯಾಗಿ ಆತ್ಮಾಹುತಿ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಉಗ್ರ ಕೃತ್ಯದ ಹಿಂದೆ ಇದ್ದವರು ಸಾಮಾನ್ಯ ಉಗ್ರರು ಅಲ್ಲ. ಉಮರ್, ಆದೀಲ್ ಮತ್ತು ಮುಜಾಮಿಲ್ ಎಂಬುವವರು ವೈದ್ಯ ವೃತ್ತಿ ಮಾಡುತ್ತಿದ್ದವರು. ಮತ್ತು ಸ್ಥಿತಿವಂತ ಕುಟುಂಬಗಳಿಂದ ಬಂದವರು. ವಿದ್ಯಾವಂತ ಯುವಕರು ಇಂತಹ ಭೀಕರ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಉಮರ್ ಎಂಬಾತ ಆತ್ಮಾಹುತಿ ಬಾಂಬ್ ಸ್ಫೋಟಿಸಿದ್ದಾನೆ ಎಂಬ ಶಂಕೆಯಿದ್ದು, ಆದೀಲ್ ಮತ್ತು ಮುಜಾಮಿಲ್ ಅವರ ಸಹಕಾರದಿಂದ ಈ ದಾಳಿ ನಡೆದಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಸ್ಫೋಟಕ್ಕೆ ಕೆಲವೇ ಗಂಟೆಗಳ ಮುನ್ನ ನಡೆದ ಪೊಲೀಸ್ ಕಾರ್ಯಾಚರಣೆಯು ಉಗ್ರರ ಯೋಜನೆಯನ್ನು ಬಯಲು ಮಾಡಿತ್ತು. ಆದರೆ, ಸಿಕ್ಕಿಬೀಳುವ ಆತಂಕದಲ್ಲಿ ಅವರು ತಮ್ಮ ಪ್ಲಾನ್ ಅನ್ನು ಬದಲಾಯಿಸಿ, ಆತ್ಮಾಹುತಿ ದಾಳಿಗೆ ಮುಂದಾಗಿದ್ದರು ಎನ್ನಲಾಗಿದೆ.
ದೆಹಲಿಯ ಘಟನೆಯ ನಂತರ ರಾಷ್ಟ್ರದ ಪ್ರಮುಖ ನಗರಗಳಲ್ಲಿ ಎಚ್ಚರಿಕೆ ಘೋಷಿಸಲಾಗಿದೆ. ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳು ಹಾಗೂ ಪ್ರವಾಸಿ ತಾಣಗಳಲ್ಲಿ ಕಠಿಣ ತಪಾಸಣೆ ನಡೆಯುತ್ತಿದೆ.
ದೆಹಲಿ ಕಾರ್ ಬಾಂಬ್ ಸ್ಫೋಟ ಘಟನೆ ಆಪರೇಷನ್ ಸಿಂದೂರಕ್ಕೆ ಪ್ರತೀಕಾರ..?
ದೆಹಲಿ: ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಭೀಕರ ಸ್ಫೋಟವೂ ದೇಶವನ್ನೇ ನಡುಗಿಸಿದೆ. ಈ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್‌ನ ಕೈವಾಡವಿದೆ ಎಂದು ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿದೆ. ಆದರೆ ಈ ಕೃತ್ಯ ವೈದ್ಯಕೀಯ ವೃತ್ತಿಯಲ್ಲಿರುವ ಮೂವರು ಡಾಕ್ಟರ್‌ಗಳು ಮತ್ತು ಒಬ್ಬ ಮಹಿಳಾ ವೈದ್ಯೆಯ ಸಹಾಯದೊಂದಿಗೆ ನಡೆದಿದೆ ಎನ್ನಲಾಗಿದೆ. ಇದು ಜೈಷ್‌ನ ಸ್ಲೀಪರ್ ಸೆಲ್‌ಗಳಿಂದ ನಡೆದ ಕೃತ್ಯವೇ? ಮತ್ತು ಇದೆಲ್ಲವೂ ಭಾರತೀಯ ವಾಯುಪಡೆಯ ಆಪರೇಷನ್ ಸಿಂದೂರಕ್ಕೆ ಪ್ರತೀಕಾರವೇ? ಎಂಬ ಅನುಮಾನ ವ್ಯಕ್ತವಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಸ್ಫೋಟದಲ್ಲಿ ಭಾಗಿಯಾದ ಮುಖ್ಯ ಆರೋಪಿಗಳು ಡಾ. ಉಮರ್, ಡಾ. ಮುಜಾಮಿಲ್ ಮತ್ತು ಡಾ. ಆದಿಲ್. ಇವರೆಲ್ಲರೂ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು. ಆದರೆ ಇವರ ನಿಜವಾದ ಗುರುತು ಜೈಷ್-ಎ-ಮೊಹಮ್ಮದ್‌ನ ಸ್ಲೀಪರ್ ಸೆಲ್ ಸದಸ್ಯರು ಎಂದು ಬಯಲಾಗಿದೆ. ಈ ಮೂವರು ಡಾಕ್ಟರ್‌ಗಳು ದೆಹಲಿಯ ಜನದಟ್ಟಣೆಯ ಪ್ರದೇಶದಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸ್ಫೋಟದಲ್ಲಿ 12 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಮೂವರು ಪುರುಷ ಡಾಕ್ಟರ್‌ಗಳಿಗೆ ಮಹಿಳಾ ವೈದ್ಯೆ ಡಾ. ಶಾಹೀನಾ ನೆರವು ನೀಡಿದ್ದಾರೆ ಎಂದು ಹೇಳಲಾಗಿದೆ. ಡಾ. ಶಾಹೀನಾ ದಿಲ್ಲಿಯ ಖ್ಯಾತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ಮೂಲಕವೇ ಬಾಂಬ್ ತಯಾರಿಕೆಗೆ ಅಗತ್ಯ ವಸ್ತುಗಳು ಮತ್ತು ಮಾಹಿತಿ ಸಂಗ್ರಹವಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಈ ಘಟನೆ ಭಾರತೀಯ ವಾಯುಪಡೆಯ ಆಪರೇಷನ್ ಸಿಂದೂರಕ್ಕೆ ನೇರ ಪ್ರತೀಕಾರವೇ ಎಂದು ಅನುಮಾನ ವ್ಯಕ್ತವಾಗಿದೆ. ಆಪರೇಷನ್ ಸಿಂದೂರ ವೇಳೆ (2025ರ ಮೇ ತಿಂಗಳಲ್ಲಿ) ಭಾರತೀಯ ವಾಯುಪಡೆ ಪಾಕಿಸ್ತಾನದ ಬಹಾವಲ್‌ಪುರ ಪ್ರದೇಶದ ಮೇಲೆ ದಾಳಿ ನಡೆಸಿತ್ತು. ಬಹಾವಲ್‌ಪುರದಲ್ಲಿ ಜೈಷ್-ಎ-ಮೊಹಮ್ಮದ್‌ನ ಪ್ರಮುಖ ತರಬೇತಿ ಶಿಬಿರವೊಂದನ್ನು ಸಂಪೂರ್ಣ ಧ್ವಂಸಗೊಳಿಸಲಾಗಿತ್ತು. ಈ ದಾಳಿಯಲ್ಲಿ ಜೈಷ್ ಮುಖ್ಯಸ್ಥ ಮಸೂದ್ ಅಜರ್‌ನ ಸಮೀಪದ ಸಂಬಂಧಿಕರು ಸೇರಿದಂತೆ ಹಲವು ಉಗ್ರರರನ್ನು ಕೊಲ್ಲಲಾಗಿತ್ತು. ಈ ಸಾವುಗಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಜೈಷ್ ಸಂಘಟನೆಯು ತನ್ನ ಸ್ಲೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಿ, ದಿಲ್ಲಿಯಲ್ಲಿ ಈ ದಾಳಿ ನಡೆಸಿರಬಹುದು ಎಂದು ಮೂಲಗಳು ತಿಳಿಸಿವೆ.





