ದೆಹಲಿ: ದೆಹಲಿಯ ಕೆಂಪುಕೋಟೆಯ ಬಳಿ ನಡೆದ ಭೀಕರ ಸ್ಫೋಟವೂ ದೇಶವನ್ನೇ ನಡುಗಿಸಿದೆ. ಈ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್‌ನ ಕೈವಾಡವಿದೆ ಎಂದು ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿದೆ. ಆದರೆ ಈ ಕೃತ್ಯ ವೈದ್ಯಕೀಯ ವೃತ್ತಿಯಲ್ಲಿರುವ ಮೂವರು ಡಾಕ್ಟರ್‌ಗಳು ಮತ್ತು ಒಬ್ಬ ಮಹಿಳಾ ವೈದ್ಯೆಯ ಸಹಾಯದೊಂದಿಗೆ ನಡೆದಿದೆ ಎನ್ನಲಾಗಿದೆ. ಇದು ಜೈಷ್‌ನ ಸ್ಲೀಪರ್ ಸೆಲ್‌ಗಳಿಂದ ನಡೆದ ಕೃತ್ಯವೇ? ಮತ್ತು ಇದೆಲ್ಲವೂ ಭಾರತೀಯ ವಾಯುಪಡೆಯ ಆಪರೇಷನ್ ಸಿಂದೂರಕ್ಕೆ ಪ್ರತೀಕಾರವೇ? ಎಂಬ ಅನುಮಾನ ವ್ಯಕ್ತವಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಸ್ಫೋಟದಲ್ಲಿ ಭಾಗಿಯಾದ ಮುಖ್ಯ ಆರೋಪಿಗಳು ಡಾ. ಉಮರ್, ಡಾ. ಮುಜಾಮಿಲ್ ಮತ್ತು ಡಾ. ಆದಿಲ್. ಇವರೆಲ್ಲರೂ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ವೈದ್ಯರು. ಆದರೆ ಇವರ ನಿಜವಾದ ಗುರುತು ಜೈಷ್-ಎ-ಮೊಹಮ್ಮದ್‌ನ ಸ್ಲೀಪರ್ ಸೆಲ್ ಸದಸ್ಯರು ಎಂದು ಬಯಲಾಗಿದೆ. ಈ ಮೂವರು ಡಾಕ್ಟರ್‌ಗಳು ದೆಹಲಿಯ ಜನದಟ್ಟಣೆಯ ಪ್ರದೇಶದಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಸ್ಫೋಟದಲ್ಲಿ 12 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಮೂವರು ಪುರುಷ ಡಾಕ್ಟರ್‌ಗಳಿಗೆ ಮಹಿಳಾ ವೈದ್ಯೆ ಡಾ. ಶಾಹೀನಾ ನೆರವು ನೀಡಿದ್ದಾರೆ ಎಂದು ಹೇಳಲಾಗಿದೆ. ಡಾ. ಶಾಹೀನಾ ದಿಲ್ಲಿಯ ಖ್ಯಾತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ಮೂಲಕವೇ ಬಾಂಬ್ ತಯಾರಿಕೆಗೆ ಅಗತ್ಯ ವಸ್ತುಗಳು ಮತ್ತು ಮಾಹಿತಿ ಸಂಗ್ರಹವಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಈ ಘಟನೆ ಭಾರತೀಯ ವಾಯುಪಡೆಯ ಆಪರೇಷನ್ ಸಿಂದೂರಕ್ಕೆ ನೇರ ಪ್ರತೀಕಾರವೇ ಎಂದು ಅನುಮಾನ ವ್ಯಕ್ತವಾಗಿದೆ. ಆಪರೇಷನ್ ಸಿಂದೂರ ವೇಳೆ (2025ರ ಮೇ ತಿಂಗಳಲ್ಲಿ) ಭಾರತೀಯ ವಾಯುಪಡೆ ಪಾಕಿಸ್ತಾನದ ಬಹಾವಲ್‌ಪುರ ಪ್ರದೇಶದ ಮೇಲೆ ದಾಳಿ ನಡೆಸಿತ್ತು. ಬಹಾವಲ್‌ಪುರದಲ್ಲಿ ಜೈಷ್-ಎ-ಮೊಹಮ್ಮದ್‌ನ ಪ್ರಮುಖ ತರಬೇತಿ ಶಿಬಿರವೊಂದನ್ನು ಸಂಪೂರ್ಣ ಧ್ವಂಸಗೊಳಿಸಲಾಗಿತ್ತು. ಈ ದಾಳಿಯಲ್ಲಿ ಜೈಷ್ ಮುಖ್ಯಸ್ಥ ಮಸೂದ್ ಅಜರ್‌ನ ಸಮೀಪದ ಸಂಬಂಧಿಕರು ಸೇರಿದಂತೆ ಹಲವು ಉಗ್ರರರನ್ನು ಕೊಲ್ಲಲಾಗಿತ್ತು. ಈ ಸಾವುಗಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಜೈಷ್ ಸಂಘಟನೆಯು ತನ್ನ ಸ್ಲೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಿ, ದಿಲ್ಲಿಯಲ್ಲಿ ಈ ದಾಳಿ ನಡೆಸಿರಬಹುದು ಎಂದು ಮೂಲಗಳು ತಿಳಿಸಿವೆ.





