ನವದೆಹಲಿ: ಭಾರತದ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ಸಂಜೆ ನಡೆದ ಭೀಕರ ಸ್ಫೋಟವು ದೇಶವನ್ನೇ ನಡುಗಿಸಿದೆ. ಈ ದಾಳಿಯಲ್ಲಿ 8 ಜನರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟಕ್ಕೆ ಬಳಸಲಾಗಿದ್ದ ಹುಂಡೈ ಐ20 ಕಾರನ್ನು ಚಾಲನೆ ಮಾಡುತ್ತಿದ್ದ ಶಂಕಿತ ಭಯೋತ್ಪಾದಕ ಡಾ. ಮೊಹಮ್ಮದ್ ಉಮರ್ ಪರಾರಿಯಾಗಿದ್ದು, ಪೊಲೀಸರ ತೀವ್ರ ಶೋಧ ನಡೆಯುತ್ತಿದೆ. ತನಿಖಾಧಿಕಾರಿಗಳು ದೃಢಪಡಿಸಿರುವಂತೆ, ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಮತ್ತು ಇಂಧನ ತೈಲವನ್ನು ಬಳಸಲಾಗಿದೆ. ಇದು ಜೈಶ್-ಎ-ಮೊಹಮದ್ ಸಂಘಟನೆಯ ಕಾರ್ಯಕರ್ತರ ಕೃತ್ಯವೆಂದು ಶಂಕಿಸಲಾಗಿದೆ.
ಕೆಂಪುಕೋಟೆಯ ಸುನೇಹಿ ಮಸೀದಿ ಬಳಿ ಪ್ರವಾಸಿಗರಿಂದ ತುಂಬಿತ್ತು. ಕಾರು ಮಧ್ಯಾಹ್ನ 3.19ಕ್ಕೆ ಪಾರ್ಕಿಂಗ್‌ಗೆ ಬಂದು, ಸಂಜೆ 6.48ಕ್ಕೆ ಹೊರಟಿದೆ. ಸ್ವಲ್ಪ ನಂತರ ಸ್ಫೋಟ ಸಂಭವಿಸಿದೆ. ಚಾಲಕನ ಮುಖ ಸ್ಪಷ್ಟವಾಗಿ ಕಂಡರೂ, ಕಾರು ಮುಂದೆ ಸಾಗುತ್ತಿದ್ದಂತೆ ಮುಸುಕುಧಾರಿ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದಾನೆ. ಪೊಲೀಸರು 100ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದು, ಕಾರಿನ ಸಂಚರಿಸಿದ ಮಾರ್ಗವನ್ನು ಪತ್ತೆಹಚ್ಚುತ್ತಿದ್ದಾರೆ.
ಡಾ. ಉಮರ್ ಮಹಮದ್ ಎಂಬುವವನೇ ಈ ದಾಳಿಯ ಮುಖ್ಯ ಶಂಕಿತನಾಗಿದ್ದಾನೆ. ಜಮ್ಮು-ಕಾಶ್ಮೀರದ ಪುಲ್ವಾಮಾ ಮೂಲದ ಉಮರ್, ಜೈಶ್ ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಹೇಳಲಾಗಿದೆ. ಅವನ ಸಹೋದರರು ಮತ್ತು ಸಂಬಂಧಿಕರನ್ನು ಬಂಧಿಸಲಾಗಿದೆ. ಪುಲ್ವಾಮಾದಲ್ಲಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದ್ದು, ಉಮರ್ ಸಂಬಂಧಿಕರಿಂದ 12 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ದೆಹಲಿಯಲ್ಲಿ ನಾಲ್ವರು ಶಂಕಿತರನ್ನು ಬಂಧಿಸಲಾಗಿದ್ದು, ಅವರು ಒಂದು ಹೋಟೆಲ್‌ನಲ್ಲಿ ತಂಗಿದ್ದರು. ಈ ನಾಲ್ವರನ್ನು ದೆಹಲಿ ಪೊಲೀಸರ ವಿಶೇಷ ತಂಡ ವಶಕ್ಕೆ ಪಡೆದುಕೊಂಡಿದೆ. ಒಟ್ಟು 13 ಮಂದಿಯನ್ನು ವಿಚಾರಣೆಗೊಳಪಡಿಸಲಾಗುತ್ತಿದೆ.
ಸೋಮವಾರ ರಾತ್ರಿ ಫರಿದಾಬಾದ್‌ನಲ್ಲಿ ಬಂಧನಗಳ ನಂತರ ಭಯದಿಂದ ಈ ದಾಳಿ ನಡೆಸಲಾಗಿದೆ ಎಂದು ತೋರುತ್ತದೆ. ಉಮರ್ ಇಬ್ಬರು ಸಹಚರರೊಂದಿಗೆ ಕಾರಿನಲ್ಲಿ ಡಿಟೋನೇಟರ್ ಇರಿಸಿ ಆತ್ಮಾಹುತಿ ದಾಳಿ ಮಾಡಿಕೊಂಡಿದ್ದಾನೆಯೇ? ಎಂಬ ಶಂಕೆ ವ್ಯಕ್ತವಾಗಿದೆ. ಜಮ್ಮು-ಕಾಶ್ಮೀರ ಗುಪ್ತಚರ ಮೂಲಗಳು ಕಾರಿನ ಮಾಲೀಕತ್ವದ ವರ್ಗಾವಣೆಯ ವಿವರ ನೀಡಿವೆ. ತೀವ್ರ ವಿಚಾರಣೆಯ ಬಳಿಕ ಸ್ಫೋಟದ ಸಂಪೂರ್ಣ ಸತ್ಯ ಹೊರಬೀಳಲಿದೆ.





