ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಬಿಕ್ಕಟ್ಟು ದಿನದಿಂದ ದಿನಕ್ಕೆ ಹದಗೆಡುತ್ತಿದೆ. ವಾಯು ಗುಣಮಟ್ಟ ಸೂಚ್ಯಂಕವು (AQI) ಅಪಾಯಕಾರಿ ಮಟ್ಟವನ್ನು ದಾಟಿದ್ದು, ಜನರ ಆರೋಗ್ಯದ ದೃಷ್ಟಿಯಿಂದ ದೆಹಲಿ ಸರ್ಕಾರವು ಕಠಿಣ ಕ್ರಮಗಳಿಗೆ ಮುಂದಾಗಿದೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರವು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಚೇರಿಗಳ ಶೇ.50 ರಷ್ಟು ನೌಕರರಿಗೆ ವರ್ಕ್ ಫ್ರಂ ಹೋಮ್ (Work From Home) ಕಡ್ಡಾಯಗೊಳಿಸಿ ಎಂದು ಅಧಿಕೃತ ಆದೇಶ ಹೊರಡಿಸಿದೆ.
ತೀವ್ರ ಪ್ಲಸ್ ಮಟ್ಟಕ್ಕೆ ತಲುಪಿದ ಮಾಲಿನ್ಯ:
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ಮಾಹಿತಿ ತಿಳಿಸಿದಂತೆ, ಡಿಸೆಂಬರ್ 15ರ ವೇಳೆಗೆ ದೆಹಲಿಯ ವಾಯುಮಾಲಿನ್ಯ ಈ ಚಳಿಗಾಲದಲ್ಲಿ ಅತ್ಯಂತ ಕೆಟ್ಟ ಸ್ಥಿತಿಗೆ ತಲುಪಿದೆ. ವಾಯು ಗುಣಮಟ್ಟವು ಕೇವಲ ‘ತೀವ್ರ’ ಮಟ್ಟದಲ್ಲಷ್ಟೇ ಇರದೆ, ಅದಕ್ಕಿಂದ ಕೆಳಮಟ್ಟದಲ್ಲಿದೆ ಅಂದರೆ ‘ತೀವ್ರ ಪ್ಲಸ್’ ವಲಯಕ್ಕೆ ಬರುವಷ್ಟು ವಾಯುಮಾಲೀನ್ಯ ಕುಸಿದಿದೆ. ಈ ಹಿನ್ನೆಲೆಯಲ್ಲಿ ವಾಯುಮಾಲಿನ್ಯ ನಿರ್ವಹಣಾ ಆಯೋಗವು ಕಠಿಣ ನಿರ್ಬಂಧಗಳನ್ನು ಒಳಗೊಂಡಿರುವ ‘ಗ್ರಾಪ್-5’ (GRAP 5) ನಿಯಮಗಳನ್ನು ಜಾರಿಗೊಳಿಸಿದೆ.
ಕಾರ್ಮಿಕರಿಗೆ 10,000 ರೂ.ಗಳ ಆರ್ಥಿಕ ನೆರವು:
ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ನಗರದಲ್ಲಿ ಎಲ್ಲಾ ರೀತಿಯ ನಿರ್ಮಾಣ ಚಟುವಟಿಕೆಗಳನ್ನು ದೀರ್ಘಕಾಲದವರೆಗೆ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ದೈನಂದಿನ ಕೂಲಿಯನ್ನು ನಂಬಿದ್ದ ಸಾವಿರಾರು ಕಟ್ಟಡ ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕಾರ್ಮಿಕರ ಹಿತದೃಷ್ಟಿಯಿಂದ ದೆಹಲಿ ಸರ್ಕಾರವು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಎಲ್ಲಾ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ತಲಾ 10,000 ರೂ.ಗಳ ಆರ್ಥಿಕ ಪರಿಹಾರವನ್ನು ನೀಡುವುದಾಗಿ ಘೋಷಿಸಿದೆ.
ನಿರ್ಬಂಧಗಳು ಮತ್ತು ದಂಡದ ಎಚ್ಚರಿಕೆ:
-
ಯಾವುದೇ ರೀತಿಯ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳುವಂತಿಲ್ಲ.
-
ನಿಯಮ ಉಲ್ಲಂಘಿಸಿ ಕಾಮಗಾರಿ ನಡೆಸುವವರ ಮೇಲೆ ಭಾರೀ ದಂಡ ವಿಧಿಸಲಾಗುವುದು.
-
ಸರ್ಕಾರಿ ಮತ್ತು ಖಾಸಗಿ ಕಂಪನಿಗಳು ಶೇ.50ರಷ್ಟು ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕು.
-
ಬಹಿರಂಗವಾಗಿ ತ್ಯಾಜ್ಯ ಸುಡುವುದು ಮತ್ತು ಧೂಳು ಎಬ್ಬಿಸುವ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ.
ವಾಹನಗಳ ದಟ್ಟಣೆ, ಕಟ್ಟಡ ಕಾಮಗಾರಿಗಳ ಧೂಳು ಮತ್ತು ನೆರೆ ರಾಜ್ಯಗಳಲ್ಲಿನ ಬೆಳೆ ತ್ಯಾಜ್ಯ ಸುಡುವಿಕೆ ಈ ಮಾಲಿನ್ಯಕ್ಕೆ ಪ್ರಮುಖ ಕಾರಣಗಳಾಗಿವೆ. ದೆಹಲಿಯ ಆಕಾಶವು ದಟ್ಟವಾದ ಹೊಗೆಯಿಂದ (Smog) ಆವೃತವಾಗಿದ್ದು, ಇದರಿಂದ ರಸ್ತೆಗಳು ಕಾಣಿಸುತ್ತಿಲ್ಲ. ಈ ಬಾರಿ ಅತೀ ಹೆಚ್ಚು ಮಂಜು ಆವರಿಸಿದೆ. ಇದರಿಂದಾಗಿ ವಾಹನ ಸವಾರರು ಸೇರಿದಂತೆ ವೃದ್ಧರು, ಮಕ್ಕಳು ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪರಿಸ್ಥಿತಿ ಸುಧಾರಿಸುವವರೆಗೆ ಈ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿರಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.





