ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿನ ವಾಯುಮಾಲೀನ್ಯ ದಿನೇ ದಿನೇ ಹೆಚ್ಚಾಗುತ್ತಿದ್ದು, ನಗರವು ‘ಗ್ಯಾಸ್ ಚೇಂಬರ್’ ಆಗಿ ಪರಿವರ್ತನೆಯಾಗಿತ್ತಿದೆ. ಹವಾಮಾನ ವೈಪರೀತ್ಯ ಹಾಗೂ ದಟ್ಟ ಮಂಜಿನಿಂದ ಸಾಮಾನ್ಯ ಜನಜೀವನದ ಮೇಲೆ ತೀವ್ರ ಪರಿಣಾಮ ಬೀರಿದೆ. ಅದರಲ್ಲೂ ವಿಮಾನಯಾನ ಮತ್ತು ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಟ್ಟವಾದ ಮಂಜಿನಿಂದ ಆವರಿಸಿದ್ದು, ವಿಮಾನಗಳ ಹಾರಾಟಕ್ಕೆ ತೀವ್ರ ಅಡಚಣೆಯಾಗಿದೆ. ಈ ಪರಿಸ್ಥಿತಿಯಿಂದಾಗಿ, ಇಂದು ಒಂದೇ ದಿನ ಸುಮಾರು 100 ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದಲ್ಲದೆ, 400ಕ್ಕೂ ಹೆಚ್ಚು ವಿಮಾನಗಳ ಹಾರಾಟವು ವಿಳಂಬಗೊಂಡಿದೆ. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ದೆಹಲಿ ಏರ್‌ಪೋರ್ಟ್ ಪ್ರಾಧಿಕಾರ, ಇಂಡಿಗೋ ಮತ್ತು ಏರ್ ಇಂಡಿಯಾ ಸೇರಿದಂತೆ ಪ್ರಮುಖ ವಿಮಾನಯಾನ ಸಂಸ್ಥೆಗಳು ತಮ್ಮ ಪ್ರಯಾಣಿಕರಿಗೆ ಎಕ್ಸ್ ಮೂಲಕ ಸಲಹೆ ಸೂಚನೆಗಳನ್ನು ನೀಡಿದ್ದು, ವಿಮಾನಗಳ ಸ್ಥಿತಿಗತಿ ತಿಳಿದು ಹೊರಡುವಂತೆ ಸೂಚಿಸಿವೆ.
ವಿಮಾನಗಳಷ್ಟೇ ಅಲ್ಲ, ರೈಲು ಸಂಚಾರಕ್ಕೂ ದಟ್ಟ ಮಂಜು ಅಡ್ಡಿಯಾಗಿದೆ. ರಾಷ್ಟ್ರದ ನಾನಾ ಭಾಗಗಳಿಗೆ ಹೊರಡಬೇಕಿದ್ದ 60ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ ಕೆಲವು ರೈಲಯಗಳು ವಿಳಂಬವಾಗಿ ತಲುಪಿವೆ. ಇದರಿಂದ ರೈಲು ಪ್ರಯಾಣಿಕರಿಗೂ ಸಹ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿನ ದಟ್ಟ ಹೊಗೆ ಮತ್ತು ಮಂಜಿನ ಕಾರಣದಿಂದ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕ (AQI) 500ಕ್ಕೆ ತಲುಪಿದೆ. 500 ಅಥವಾ ಅದಕ್ಕಿಂತ ಹೆಚ್ಚಿನ AQI ಅನ್ನು ‘ತೀವ್ರ ಅಪಾಯಕಾರಿ’ ಎಂದು ಪರಿಗಣಿಸಲಾಗುತ್ತದೆ. ಈ ಪರಿಸ್ಥಿತಿ ಜನಸಾಮಾನ್ಯರ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರುತ್ತಿದೆ. ಉಸಿರಾಟದ ಸಮಸ್ಯೆಗಳು, ಕಣ್ಣುರಿ ಮತ್ತು ಇತರ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ.
ದೆಹಲಿಯ ಈ ವಿಷಕಾರಿ ವಾತಾವರಣವು ಸಾಮಾನ್ಯ ನಾಗರಿಕರಿಗೆ ಮಾತ್ರವಲ್ಲದೆ, ದೇಶದ ಉನ್ನತ ನಾಯಕರಿಗೂ ತಟ್ಟಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೋರ್ಡಾನ್, ಇಥಿಯೋಪಿಯಾ ಮತ್ತು ಓಮನ್ ಪ್ರವಾಸ ಕೈಗೊಂಡಿದ್ದರು. ಆದರೆ, ದೆಹಲಿಯಲ್ಲಿ ದಟ್ಟ ಮಂಜು ಕವಿದ ಪರಿಣಾಮ, ಪ್ರಧಾನಿಯವರ ವಿಮಾನವು ಸರಿಯಾದ ಸಮಯಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ, ಬೆಳಗ್ಗೆ 8:30ಕ್ಕೆ ತೆರಳಬೇಕಿದ್ದ ಪ್ರಧಾನಿಯವರ ವಿದೇಶ ಪ್ರವಾಸದ ವಿಮಾನ ಹಾರಾಟ ಸ್ವಲ್ಪ ಸಮಯ ತಡವಾಗಿ ಟೇಕಾಫ್ ಆಯಿತು.
ಇದಲ್ಲದೇ, ದೆಹಲಿಯ ದಟ್ಟ ಮಂಜು ಸುಪ್ರೀಂ ಕೋರ್ಟ್ ಕಲಾಪಗಳಿಗೂ ಅಡ್ಡಿಯುಂಟುಮಾಡಿದೆ. ದಿಟ್ಟ ಮಂಜಿನಿಂದ ದೆಹಲಿಗೆ ಪ್ರಯಾಣಿಸುವುದು ಕಷ್ಟಕರವಾದ ಕಾರಣ, ನ್ಯಾಯಾಲಯದ ನ್ಯಾಯಾಧೀಶರು ವಕೀಲರು ಹಾಗೂ ಅರ್ಜಿದಾರರಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಸಲಹೆ ನೀಡಿದರು. ಇದರಿಂದಾಗಿ ಮಹತ್ವದ ಪ್ರಕರಣಗಳ ನ್ಯಾಯಾಂಗ ಪ್ರಕ್ರಿಯೆಗಳ ಮೇಲೆ ಹವಾಮಾನದ ನೇರ ಪರಿಣಾಮ ಬೀರಿದ್ದು ಸ್ಪಷ್ಟವಾಗಿದೆ.
ದಟ್ಟ ಮಂಜು ಮತ್ತು ವಾಯು ಮಾಲಿನ್ಯದ ಈ ಸವಾಲುಗಳನ್ನು ಎದುರಿಸಲು ದೆಹಲಿ ಮತ್ತು ಕೇಂದ್ರ ಸರ್ಕಾರಗಳು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಪರಿಸ್ಥಿತಿ ಸುಧಾರಣೆಯಾಗುವವರೆಗೂ ಪ್ರಯಾಣಿಕರು ವಿಮಾನ ಮತ್ತು ರೈಲುಗಳ ಸಂಚಾರದ ಬಗ್ಗೆ ಅಧಿಕೃತ ಮಾಹಿತಿ ಪಡೆದು ತಮ್ಮ ಪ್ರಯಾಣವನ್ನು ಯೋಜಿಸುವುದು ಸೂಕ್ತ.





